ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ನೆಲೆಸಿದ್ದಾಳೆ ತಾಯಿ ಭುವನೇಶ್ವರಿ. ನಾಡಿಗೊಂದು ಅಧಿದೇವತೆ, ಭಾಷೆಗೊಂದು ಸುಂದರ ಲಾಂಛನವನ್ನು ಹೊಂದಿರುವ ಅಪರೂಪದ ಭಾಷೆ ಕನ್ನಡ. ಕನ್ನಡಿಗರೆಲ್ಲ ಹೆಮ್ಮೆಪಡಬಹುದಾದ ವಿಷಯ. ಕನ್ನಡ ಭಾಷೆಯ ನೆಲ, ಜಲ, ನುಡಿಗಾಗಿ ಕದಂಬರ ಅರಸ ವೀರ ಮಯೂರನಿಂದಾಗಿ ಸ್ವಾಭಿಮಾನಿ ರಾಜ್ಯ ನಿರ್ಮಾಣವೇ ನಡೆದು ಹೋದ ಅಪರೂಪದ ಇತಿಹಾಸ ಕನ್ನಡ ನಾಡಿನದ್ದು. ಇಂತಹ ಹೆಮ್ಮೆಯ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿ ನಿಂತಿದೆ ಉತ್ತರ ಕನ್ನಡ ಜಿಲ್ಲೆ. ಇಂದಿಗೂ ಈ ನೆಲ ಕನ್ನಡದ ಕುಲದೇವಿಯನ್ನ ಮಡಿಲಲ್ಲಿಟ್ಟುಕೊಂಡು, ಕನ್ನಡತನವನ್ನು ಎದೆಯ ಗುಂಡಿಗೆಯಲ್ಲಿ ತುಂಬಿಟ್ಟು ಉಸಿರಾಡುತ್ತಿದೆ. ತಾಯಿ ಭುವನೇಶ್ವರಿ ದೇವಿ ನೆಲೆನಿಂತಿರುವ, ಕನ್ನಡ ಸಾಮ್ರಾಜ್ಯ ಕಟ್ಟಲ್ಪಟ್ಟ ಕನ್ನಡಿಗರ ಇತಿಹಾಸ ಕಾಶಿಯಿದು. ಇಂತಹ ನೆಲವಾದ ಉತ್ತರ ಕನ್ನಡದ ಸಿದ್ದಾಪುರದಿಂದ ಕುಮಟಾ ರಸ್ತೆಯಲ್ಲಿ ಎಂಟು ಕಿಲೋ ಮೀಟರ್ ದೂರವಿರುವ ಭುವನಗಿರಿ ಕನ್ನಡಿಗರ ಸಿರಿಯನ್ನು ಶಿರದಲ್ಲಿ ಹೊತ್ತು ನಿಂತ ನೆಲ. ಅಪ್ಪಟ ಮಲೆನಾಡ ಹಸಿರು ಸೊಬಗಿನ ನಡುವೆ ಕನ್ನಡಿಗರೊಡತಿ ತಾಯಿ ಭುವನೇಶ್ವರಿ ದೇವಿ ನೆಲೆನಿಂತಿದ್ದಾಳೆ. ದಟ್ಟ ಹಸಿರು ಬೆಟ್ಟದ ಮೇಲೆ ಕುಳಿತು ಕನ್ನಡಿಗರನ್ನು ಹರಸುತ್ತಿದ್ದಾಳೆ. ಮೂರು ಶತಮಾನಗಳಿಗೂ ಮೊದಲೇ ಬಿಳಗಿಯ ಅರಸರು ತಾಯಿ ಭುವನೇಶ್ವರಿ ದೇವಿಯ ದೇಗುಲ ನಿರ್ಮಾಣದ ಮೂಲಕ ಕನ್ನಡತಿಯ ತೇರನ್ನು ಎಳೆದಿದ್ದರು. ತಾಯ್ನುಡಿಯ ಪೂಜೆಗೆ ಅಧಿಕೃತ ಮುನ್ನುಡಿ ಬರೆದಿದ್ದರು. ವಿಜಯನಗರದ ಅರಸರು ಸಹ ಮಾತೆ ಭುವನೇಶ್ವರಿಗೆ ವಂದಿಸಿಯೇ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದರು. ಈ ಕಾರಣಕ್ಕಾಗಿ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಭುವನೇಶ್ವರಿ ವಿಗ್ರಹವನ್ನು ಕಾಣಬಹುದಾಗಿದೆ. ಈ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಹದಿನೇಳನೆಯ ಶತಮಾನದವರೆಗಿನ ದಾಖಲೆಗಳು ಲಭ್ಯವಿಲ್ಲ. ಮದ್ರಾಸ್ ರೆಸಿಡೆನ್ಸಿಗೆ ಸೇರಿದ್ದ ದಾಖಲೆಯ ಕಡತಗಳು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕ್ರಿ.ಶ. 1600ರ ನಂತರದ ಇತಿಹಾಸವಿದೆ ಎನ್ನಲಾಗಿದೆ.