
ಮಂಗಳೂರು: ಕೆನರಾ ಶಿಕ್ಷಣ ಸಂಸ್ಥೆ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ನಿರ್ಧರಿಸಿದರೆ, ₹50 ಕೋಟಿ ಕೊಡುಗೆ ನೀಡುವುದಾಗಿ ದಾನಿ ಪಿ. ದಯಾನಂದ ಪೈ ಹೇಳಿದರು.
ಕೆನರಾ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನಿರ್ಮಾಣಗೊಂಡಿರುವ ಡಾ.ಪಿ. ದಯಾನಂದ ಪೈ, ಪಿ. ಸತೀಶ್ ಪೈ ಆಡಿಟೋರಿಯಂ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಈ ವಿಷಯ ಪ್ರಕಟಿಸಿದರು. ಕೆನರಾ ಶಿಕ್ಷಣ ಸಂಸ್ಥೆಗಳಿಗೆ 134 ವರ್ಷಗಳ ಹಿರಿಮೆಯಿದೆ. ಕೆನರಾ ಬ್ಯಾಂಕ್ ಅಂತರಾಷ್ಟ್ರೀಯ ಮನ್ನಣೆ ಪಡೆದು ಮುನ್ನಡೆಯುತ್ತಿದೆ. ಶಿಕ್ಷಣರಂಗದಲ್ಲಿ ಕೆನರಾ ಇನ್ನಷ್ಟು ಬೆಳೆಯಬೇಕು. ವಿಶೇಷವಾಗಿ ವೈದ್ಯಕೀಯ ಮತ್ತು ಕಾನೂನು ಕಾಲೇಜುಗಳನ್ನು ಆರಂಭಿಸುವ ನಿಟ್ಟಿನಲ್ಲಿ ಶೀಘ್ರ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.
ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಭಾಭವನ ಉದ್ಘಾಟಿಸಿದ ಕಾಶಿ ಮಠಾಧೀಶ ಸಂಯಮಿಂದ್ರ ತೀರ್ಥ ಸ್ವಾಮೀಜಿ, ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜು ಆರಂಭಕ್ಕೆ ಪೂರ್ವಭಾವಿಯಾಗಿ ಸುಸಜ್ಜಿತ ಆಸ್ಪತ್ರೆ ಆರಂಭಿಸುವುದು ಉತ್ತಮ. ಬದುಕಿನಲ್ಲಿ ಶಿಕ್ಷಣ ಮತ್ತು ಹಣ ಎರಡೂ ಮುಖ್ಯ. ಅವರೆಡರಿಂದ ಮಾತ್ರ ಸಮುದಾಯದ ಪ್ರಗತಿ ಸಾಧ್ಯ ಎಂದು ಅರಿತ ಅಮ್ಮೆಂಬಳ ಸುಬ್ಬರಾವ್ ಪೈ ಕೆನರಾ ಶಿಕ್ಷಣ ಸಂಸ್ಥೆಗಳು ಮತ್ತು ಕೆನರಾ ಬ್ಯಾಂಕ್ ಆರಂಭಿಸುವ ಮೂಲಕ ನಾಡಿಗೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದರು.
ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಕೆನರಾ ಶಿಕ್ಷಣ ಸಮೂಹ ಸಂಸ್ಥೆಗಳು ಮೆಡಿಕಲ್, ಕಾನೂನು ಕಾಲೇಜು ಆರಂಭಿಸಿದರೆ ಕರಾವಳಿಯ ಜನರಿಗೆ ಅನುಕೂಲವಾಗಲಿದೆ ಎಂದರು.
ಮೋಹಿನಿ ಡಿ. ಪೈ, ಪಿ.ಸತೀಶ್ ಪೈ, ಪಿ. ಸಬಿತಾ ಎಸ್. ಪೈ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಿ.ವಾಸುದೇವ
ಕಾಮತ್, ಉಪಾಧ್ಯಕ್ಷ ಎಸ್ ಸುರೇಶ್ ಕಾಮತ್, ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್, ಜತೆ ಕಾರ್ಯದರ್ಶಿ ಟಿ.ಗೋಪಾಲಕೃಷ್ಣ ಶೆಣೈ, ಕೋಶಾಧಿಕಾರಿ ವಾಮನ್ ಕಾಮತ್, ಪ್ರಾಂಶುಪಾಲ ನಾಗೇಶ್ ಎಚ್.ಆರ್ ಇದ್ದರು.
ಎಂ. ಜಗನ್ನಾಥ ಕಾಮತ್ ಸ್ವಾಗತಿಸಿದರು.