ನವದೆಹಲಿ: ದೇಶದ ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಭಾರತೀಯರಿಗಾಗಿ ಇತ್ತೀಚೆಗೆ 17 ಆಹಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಆರೋಗ್ಯಕರ ಜೀವನದೊಂದಿಗೆ ಸಮತೋಲಿತ ಮತ್ತು ವೈವಿಧ್ಯಮಯ ಆಹಾರವನ್ನು ಅನುಸರಿಸುವಂತೆ ಸಲಹೆ ನೀಡಿದೆ.
ಮಾರ್ಗಸೂಚಿಗಳ ಪೈಕಿ, ಐಸಿಎಂಆರ್‌ (ICMR) ಅಡಿಯಲ್ಲಿ ಸಂಶೋಧನಾ ವಿಭಾಗವಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN), ಚಹಾ ಮತ್ತು ಕಾಫಿಯನ್ನು ಮಿತವಾಗಿ ಸೇವನೆ ಮಾಡಬೇಕು ಎಂದು ಹೇಳಿದೆ. ಇದಲ್ಲದೆ, ಊಟಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಮತ್ತು ಊಟದ ನಂತರ ಒಂದು ತಾಸಿನ ಒಳಗೆ ಕಾಫಿ ಮತ್ತು ಚಹಾವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿಸಿದೆ.

ಭಾರತೀಯರಲ್ಲಿ ಚಹಾ ಮತ್ತು ಕಾಫಿ ಈ ಎರಡೂ ಬಿಸಿ ಪಾನೀಯಗಳ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಐಸಿಎಂಆರ್ ಜನರು ಊಟಕ್ಕೆ ಮುಂಚೆ ಅಥವಾ ನಂತರ ಸೇವಿಸದಂತೆ ಸಲಹೆ ನೀಡಿದೆ. “ಟೀ ಮತ್ತು ಕಾಫಿಗಳಲ್ಲಿ ಕೆಫೀನ್ ಇರುತ್ತದೆ, ಇದು ಕೇಂದ್ರ ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ದೈಹಿಕ ಅವಲಂಬನೆಗೆ ಕಾರಣವಾಗಬಹುದು ” ಎಂದು ಐಸಿಎಂಆರ್ ಸಂಶೋಧಕರು ಹೇಳಿದ್ದಾರೆ.
ಆದಾಗ್ಯೂ, ಮಾರ್ಗಸೂಚಿಯು ಚಹಾ ಅಥವಾ ಕಾಫಿ ಸೇವನೆಯನ್ನು ಸಂಪೂರ್ಣವಾಗಿ ಬಿಡಬೇಕು ಎಂದು ಸೂಚಿಸಿಲ್ಲ. ಬದಲಾಗಿ, ಈ ಪಾನೀಯಗಳಲ್ಲಿನ ಕೆಫೀನ್ ಅಂಶದ ಬಗ್ಗೆ ಜಾಗರೂಕರಾಗಿರಬೇಕು ಎಂದು ಎಲ್ಲರಿಗೂ ಸಲಹೆ ನೀಡಿದೆ. “ಚಹಾ ಮತ್ತು ಕಾಫಿ ಸೇವನೆಯಲ್ಲಿ ಮಿತವಾಗಿರಬೇಕು ಎಂದು ಸಲಹೆ ನೀಡಲಾಗುತ್ತದೆ, ಕೆಫೀನ್ ಸೇವನೆಯ ಮಿತಿ ದಿನಕ್ಕೆ 300mg ಮೀರುವುದು ಬೇಡ ಎಂದು ಹೇಳಿದೆ.

ಚಹಾ ಮತ್ತು ಕಾಫಿಯಲ್ಲಿರುವ ಟ್ಯಾನಿನ್ ಕಬ್ಬಿಣದ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ. ಟ್ಯಾನಿನ್‌ಗಳು ಹೊಟ್ಟೆಯಲ್ಲಿ ಕಬ್ಬಿಣವನ್ನು ಕಟ್ಟುತ್ತವೆ, ದೇಹಕ್ಕೆ ಕಬ್ಬಿಣವನ್ನು ಸರಿಯಾಗಿ ಹೀರಿಕೊಳ್ಳಲು ಕಷ್ಟವಾಗುತ್ತದೆ. ಇದು ಕಬ್ಬಿಣದ ಕೊರತೆ ಮತ್ತು ರಕ್ತಹೀನತೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅತಿಯಾದ ಕಾಫಿ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿನ ಅಸಹಜತೆಗಳಿಗೂ ಕಾರಣವಾಗಬಹುದು ಎಂದು ಅದು ಹೇಳಿದೆ.

ಕಬ್ಬಿಣದ ಹೀರಿಕೊಳ್ಳುವಿಕೆಯ ಪ್ರಮಾಣವು ಕಡಿಮೆಯಾಗುವುದರಿಂದ ದೇಹದಲ್ಲಿ ಕಬ್ಬಿಣದ ಕೊರತೆಗೆ ಕಾರಣವಾಗುತ್ತದೆ, ಇದು ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತ ಕಣಗಳಲ್ಲಿನ ಪ್ರೋಟೀನ್ ಆಗಿರುವ ಹಿಮೋಗ್ಲೋಬಿನ್ ತಯಾರಿಸುವ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತದೆ. ಹಿಮೋಗ್ಲೋಬಿನ್ ಉತ್ಪಾದನೆಯ ಜೊತೆಗೆ, ಕಬ್ಬಿಣವು ಶಕ್ತಿಯ ಉತ್ಪಾದನೆ ಮತ್ತು ಒಟ್ಟಾರೆ ಜೀವಕೋಶದ ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಡಿಮೆ ಕಬ್ಬಿಣದ ಮಟ್ಟವು ಕಬ್ಬಿಣದ ಕೊರತೆ ಮತ್ತು ರಕ್ತಹೀನತೆಯಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಎಂದು ಐಸಿಎಂಆರ್‌ ಹೇಳಿದೆ.
ಐಸಿಎಂಆರ್‌ ಮಾರ್ಗಸೂಚಿಗಳು ಹಾಲು ಇಲ್ಲದೆ ಚಹಾ ಸೇವಿಸುವುದರಿಂದ ಸುಧಾರಿತ ರಕ್ತ ಪರಿಚಲನೆಯಂತಹ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಮತ್ತು ಪರಿಧಮನಿಯ ಕಾಯಿಲೆ (ಸಿಎಡಿ) ಮತ್ತು ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದೆ.