ಖಾನಾಪುರ: ಸ್ಥಳೀಯ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳಕರ್ ಮಂಗಳವಾರ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಾರವಾರ ನಗರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮುಖಂಡ ಭರತೇಶ ತೋರೋಜಿ ಹೇಳಿದರು. ಪಟ್ಟಣದಲ್ಲಿ ಶನಿವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಡಾ.ಅಂಜಲಿ ಅವರೊಂದಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕರಾದ ಭೀಮಣ್ಣ ನಾಯ್ಕ, ಬಾಬಾಸಾಹೇಬ ಪಾಟೀಲ, ಸತೀಶ ಸೈಲ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ, ಮುಖಂಡರಾದ ನಿವೇದಿತಾ ಆಳ್ವಾ, ಪ್ರಶಾಂತ ದೇಶಪಾಂಡೆ ಸೇರಿದಂತೆ ಪಕ್ಷದ ರಾಜ್ಯ ಹಾಗೂ ಜಿಲ್ಲಾ ಘಟಕದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸುನೀಲ ಹಂಜಿ, ಮಹಾಂತೇಶ ಕಲ್ಯಾಣಿ, ಸಂತೋಷ ಹಂಜಿ, ಮಹಾಂತೇಶ ರಾಹೂತ, ಮಧು ಕವಳೇಕರ, ಮಹಾಂತೇಶ ವಾಲಿ, ದೇಮಣ್ಣ ಬಸರಿಕಟ್ಟಿ, ಸುರೇಶ ದಂಡಗಲ ಹಾಗೂ ಇತರರು ಇದ್ದರು.