ಬೆಳಗಾವಿ : ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರು ಎಂಥ ಕಠಿಣ ಪರಿಸ್ಥಿತಿಯಲ್ಲೂ ತಮ್ಮ ವೈಯಕ್ತಿಕ ಬದುಕಿಗಿಂತ ದೇಶದ ಹಿತ ಮುಖ್ಯ ಎಂಬುದನ್ನು ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದರು ಎಂದು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರ್ಜುನ ಜಂಬಗಿ ಅಭಿಪ್ರಾಯಪಟ್ಟರು.

ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಭಾರತದ ಎರಡನೇ ಪ್ರಧಾನ ಮಂತ್ರಿ ಲಾಲ್ ಬಹುದ್ದೂರ್ ಶಾಸ್ತ್ರಿಜಿ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಇಬ್ಬರೂ ಮಹಾನ್ ಚೇತನರು ಬದುಕಿದ ರೀತಿ ಹಾಗೂ ಅವರ ಆದರ್ಶಗಳು ನಮಗೆ ದಾರಿದೀಪವಾಗಿವೆ. ಇಬ್ಬರು ಜಗತ್ತಿಗೆ ನೀಡಿದ ಪ್ರಮುಖ ಸಂದೇಶ ಎಂದರೆ, ಒಬ್ಬ ವ್ಯಕ್ತಿ ಸಮಷ್ಟಿ ಪ್ರಜ್ಞೆಯಿಂದ ಬೆಳೆದರೆ ತಾನು ಬೆಳೆಯುತ್ತಾನೆ, ಸಮಾಜವನ್ನು ಬೆಳೆಸುತ್ತಾನೆ. ಆಗ ಬದುಕು ಸಾರ್ಥಕವಾಗುತ್ತದೆ. ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ರೂಪರೇಷೆಗಳು ಇಡೀ ಜಗತ್ತಿಗೆ ಮಾದರಿಯಾಯಿತು. ಇಂದು ಅದೆಷ್ಟೋ ದೇಶಗಳು ಅವರ ಆದರ್ಶಗಳು ಅಳವಡಿಸಿಕೊಂಡಿವೆ. ಇಂದಿನ ಯುದ್ಧೋನ್ಮಾದ ಜಗತ್ತಿಗೆ ಗಾಂಧೀಜಿಯ ಶಾಂತಿ, ಸಹಬಾಳ್ವೆ, ಸಹಿಷ್ಣುತೆ, ಅಹಿಂಸೆ ಮಾರ್ಗಗಳು ಎಂದಿಗಿಂತಲೂ ಇಂದು ಅವಶ್ಯಕ. ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಅವರ ಪ್ರಾಮಾಣಿಕತೆ, ಬದ್ಧತೆ, ನಿಷ್ಪಕ್ಷಪಾತ, ಹೋರಾಟವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಹೇಶ ಗಾಜಪ್ಪನರ ಅವರು ಗಾಂಧೀಜಿ ಮತ್ತು ಶಾಸ್ತ್ರೀಜಿ ಯವರ ಜೀವನದ ಕುರಿತು, ಡಾ. ಸಾವುಕಾರ ಕಾಂಬಳೆ, ಇಬ್ಬರ ಹೋರಾಟದ ಮಾದರಿ, ಡಾ. ನಾರಾಯಣ ನಾಯ್ಕ, ಇಬ್ಬರ ಆದರ್ಶಗಳ ಕುರಿತು ಮಾತನಾಡಿದರು. ಡಾ. ವಿನಯ ನಂದಿಹಾಳ ನಿರೂಪಿಸಿದರು. ವಾಣಿಜ್ಯ ಶಾಸ್ತ್ರದ ಉಪನ್ಯಾಸಕ ನಾರಾಯಣ ಘಂಟಿ ವಂದಿಸಿದರು. ಐಕ್ಯೂಎಸಿ ಸಂಯೋಜಕ ಡಾ. ಆದಿನಾಥ ಉಪಾಧ್ಯೆ, ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.