Join The Telegram | Join The WhatsApp |
ನೀಟ್ ಪರೀಕ್ಷೆಯಲ್ಲಿ ರಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸಮವಸ್ತ್ರ ಅರ್ಪಣೆ
ಬೆಳಗಾವಿ-
ವೈದ್ಯಕೀಯ ವೃತ್ತಿಯು ಒಂದು ಪವಿತ್ರವಾದ ಸೇವೆಯಾಗಿದೆ. ಅದನ್ನ ಸಮಾಜಮುಖಿಯಾಗಿ ಅರ್ಪಣೆ ಮಾಡಿದಾಗ ಅದರ ಪವಿತ್ರತೆ ಹೆಚ್ಚಾಗುತ್ತದೆ ಎಂದು ಖ್ಯಾತ ಸಾಹಿತಿ ಡಾ. ಬಸವರಾಜ್ ಜಗಜಂಪಿ ಅವರು ಹೇಳಿದರು.
ಅವರು ಬಸವನ ಕುಡಚಿ ದೇವರಾಜ್ ಅರಸ್ ಕಾಲೋನಿಯಲ್ಲಿ ಶ್ರೀ ಶಿವಬಸವೇಶ್ವರ ಟ್ರಸ್ಟ್ ಲಿಂಗೈಕ ಚಿನ್ನಮ್ಮ ಹಿರೇಮಠ ವೃದ್ರಾಶ್ರಮದಲ್ಲಿ ಡಾ. ರಾಮಣ್ಣವರ ಟ್ರಸ್ಟ್, ಮಹಾಂತ ಟ್ರೇಡರ್ಸ್, ಜನನಿ ಟ್ರಸ್ಟ್ ಬೈಲ್ಹೊಂಗಲ್ ಇವರ ಸಂಯುಕ್ತ ಆಶ್ರಯದಲ್ಲಿ ನೀಟ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ವೈದ್ಯಕೀಯ ಪ್ರವೇಶವನ್ನು ಪಡೆದ ಬೈಲ್ಹೊಂಗಲ್ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸಮವಸ್ತ್ರ ಮತ್ತು ಪುಸ್ತಕ ದಾಸೋಹ ಸಮಾರಂಭದಲ್ಲಿ ಮಾತನಾಡಿದರು.
ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ವೈದ್ಯಕೀಯ ಕೋರ್ಸಿಗೆ ಪ್ರವೇಶ ಪಡೆದಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ತಂದೆ ತಾಯಿಗಳ ಕನಸನ್ನ ನೀವು ನನಸಾಗಿದ್ದೀರಿ. ಈ ಭರವಸೆ ಹೆಜ್ಜೆಗಳನ್ನ ಮುಂದಿನ ವೈದ್ಯಕೀಯ ಶಿಕ್ಷಣದಲ್ಲಿಯೂ ಕೂಡ ಮುಂದುವರಿಸಬೇಕು. ವೈದ್ಯರಾದರೆ ಮಾತ್ರ ಸಾಲುವುದಿಲ್ಲ ಮಾನವೀಯ ಮೌಲ್ಯಗಳನ್ನು ಕೂಡ ಹೊಂದುವುದು ಅಷ್ಟೇ ಮಹತ್ವಪೂರ್ಣವಾದದ್ದು. ಜನಸಾಮಾನ್ಯರ ಸೇವೆ ಮಾಡುವುದರಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಆದರ್ಶ ವೈದ್ಯರ ಬದುಕನ್ನು ಅರಿಯಬೇಕು. ಗುರು ಹಿರಿಯರ ಮಾರ್ಗದರ್ಶನ ಪಡೆಯಬೇಕು. ಒಬ್ಬ ಹೃದಯವಂತ ವೈದ್ಯ ಸಮಾಜಕ್ಕೆ ಸಂಜೀವಿನಿ ಆಗಿರುತ್ತಾನೆ ಎಂದು ಹೇಳಿದರು.
ಖ್ಯಾತ ಸ್ತ್ರೀರೋಗ ತಜ್ಞರಾದ ಡಾಕ್ಟರ್ ದತ್ತಾತ್ರೆ ಬಿಜರೇ ಅವರು ಮಾತನಾಡಿ, ವೈದ್ಯಕೀಯ ಸೀಟು ದೊರೆತ ಮಾತ್ರಕ್ಕೆ ನಾವು ವೈದ್ಯರಾಗಲಿಲ್ಲ. ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು. ದುಷ್ಟ ಹವ್ಯಾಸಗಳಿಗೆ ಒಳಗಾಗದೆ ನಿಷ್ಠೆ ಬದ್ಧತೆಯಿಂದ ಕಲಿಕೆಯಲ್ಲಿ ಹೊಸತನವನ್ನು ಹೊಂದಬೇಕು. ಸಮಯ ಹಾಗೂ ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು. ವೈದ್ಯರಾದ ಮಾತ್ರಕ್ಕೆ ದೇವರು ಆಧ್ಯಾತ್ಮವನ್ನ ದೂರಸರಿಸುವುದಲ್ಲ ಅದರ ಹತ್ತಿರವಾಗುವುದು. ಅಂತಹ ಒಂದು ಶಕ್ತಿ ನಮ್ಮನ್ನು ಸದಾ ಆವರಿಸಿಕೊಂಡಿರುತ್ತದೆ. ಸಮಾಜದ ಆದರ್ಶ ವೈದ್ಯರಾಗಿ ಈ ಮಣ್ಣಿನ ಈ ದೇಶದ ಋಣವನ್ನ ತೀರಿಸಬೇಕು. ವೈದ್ಯದೇವೋಭವ ಎಂಬ ಮಾತಿನಂತೆ ಬದುಕನ್ನು ಅನ್ವರ್ಥಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಕಾರಂಜಿ ಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಅತ್ಯಂತ ಪರಿಸರಮದಿಂದ ವಿದ್ಯಾರ್ಥಿಗಳೆಲ್ಲ ವೈದ್ಯಕೀಯ ವೃತ್ತಿಗೆ ಪ್ರವೇಶ ಪಡೆದು ನಾಡಿನ ಹೆಮ್ಮೆಯನ್ನು ಹೆಚ್ಚಿಸಿದ್ದೀರಿ. ಭವಿಷ್ಯತ್ತಿನಲ್ಲಿಯು ಕೂಡ ಈ ಅಕ್ಷರ ಜ್ಞಾನದ ಯಾತ್ರೆ ಮುಂದುವರಿಯಲಿ. ಶಿಸ್ತು ಸೌಜನ್ಯಗಳು ನಿಮ್ಮ ಬದುಕಿನ ಮೌಲ್ಯಗಳಾಗಲಿ. ಗುರು ಹಿರಿಯರ ಆಶೀರ್ವಾದದೊಂದಿಗೆ ಸಮಾಜಕ್ಕಾಗಿ ಅಹರ್ನಿಸಿಯಾಗಿ ದುಡಿಯಿರಿ. ವೈದ್ಯಕೀಯ ವೃತ್ತಿಯನ್ನು ಹಣ ಗಳಿಸುವ ವೃತ್ತಿಯನ್ನಾಗಿ ಮಾಡಿಕೊಳ್ಳದೆ ಸಮಾಜ ಸೇವೆ ಮಾಡುವ ಪವಿತ್ರ ಕರ್ತವ್ಯವೆಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ರಾಮಣ್ಣವರ ಟ್ರಸ್ಟ್ ಕಾರ್ಯದರ್ಶಿಗಳಾದ ಡಾ. ಮಹಾಂತೇಶ್ ರಾಮಣ್ಣವರ ಪ್ರಸ್ತಾವಿಕವಾಗಿ ಮಾತನಾಡುತ್ತಾ, ಪ್ರತಿ ವರ್ಷ ನೀಟ್ ಪರೀಕ್ಷೆಯಲ್ಲಿ ರಾಂಕ್ ಪಡೆದಂತಹ ಬೈಲಹೊಂಗಲ ತಾಲೂಕಿನ ವಿದ್ಯಾರ್ಥಿಗಳನ್ನು ಗುರುತಿಸುವ ಮೂಲಕ ಟ್ರಸ್ಟ್ ಅವರನ್ನ ವೈದ್ಯಕೀಯ ಅಧ್ಯಯನಕ್ಕೆ ಬೇಕಾದ ಪಠ್ಯ ಹಾಗೂ ಉಪಕರಣಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಿ ಅವರ ನೈತಿಕ ಜವಾಬ್ದಾರಿಗಳನ್ನು ಹೆಚ್ಚಿಸುತ್ತಿದೆ. ನಮ್ಮ ಸಮಾಜದ ಆದರ್ಶ ವೈದ್ಯರಾಗಿ ಗ್ರಾಮೀಣ ಭಾಗದಲ್ಲಿ ಸೇವೆಯನ್ನು ಸಲ್ಲಿಸುವಂತಾಗಲಿ ಎಂದು ಹೇಳಿದರು.
ವೇದಿಕೆ ಮೇಲೆ ಖ್ಯಾತ ವೈದ್ಯರಾದ ಡಾ. ಮಹಾಂತೇಶ್ ಶೆಟ್ಟಿ, ವೃದ್ರಾಶ್ರಮದ ಸಂಯೋಜಕರಾದ ಎಸ್ ಎಮ್ ಚೌಗುಲಾ ಲಿಂಗರಾಜ್ ಕಾಲೇಜಿನ ಪ್ರಾಧ್ಯಾಪಕರಾದ ಡಾ ಮಹೇಶ್ ಗುರುನಗೌಡರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 22 ವೈದ್ಯ ವಿದ್ಯಾರ್ಥಿಗಳಿಗೆ (ಅಪ್ರಾನ್) ಸಮವಸ್ತ್ರ, ಪಠ್ಯಪುಸ್ತಕ, ಚತುಸ್ಕೋಪ್ ವಿದ್ಯಾರ್ಥಿಗಳ ಪಾಲಕರ ಮೂಲಕವೇ ಆಶೀರ್ವದಿಸಲಾಯಿತು. ಡಾ. ಮಹಾಂತೇಶ್ ರಾಮಣ್ಣವರ್ ಸ್ವಾಗತಿಸಿ ವಂದಿಸಿದರು.
Join The Telegram | Join The WhatsApp |