ಮುಡಿಪು: ಸೇಡಿಯಾಪು ಅವರು ಕವಿಯಾಗಿ, ಸಾಹಿತಿಯಾಗಿ, ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದರು.ಪ್ರಗತಿಪರ ಚಿಂತಕರಾಗಿದ್ದ ಅವರದ್ದು ವಸ್ತುನಿಷ್ಠವಾಗಿ ಆಲೋಚನೆ ಮಾಡುವ ವ್ಯಕ್ತಿತ್ವ. ಪ್ರಗತಿಯು ಹೇಗಿರಬೇಕೆಂದರೆ ಸಾತ್ವಿಕತೆ, ಒಗ್ಗೂಡಿಸುವ ಮೂಲಕ ಆಗಬೇಕು ಎಂದು ನಂಬಿದ್ದ ಅವರದ್ದು ತಾತ್ವಿಕ ಸಮೃದ್ಧಿಯ ಬರವಣಿಗೆಯಾಗಿತ್ತು ಎಂದು ಕಾಸರಗೋಡಿನ ಕೇರಳ ಕೇಂದ್ರೀಯ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ ಪದ್ಯಾಣ ಅವರು ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ ,ಮಂಗಳೂರು ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಮಂಗಳವಾರ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ಕಸಾಪ ದತ್ತಿ ಉಪನ್ಯಾಸ, ಅಂಬಲಪಾಡಿ ವ್ಯಾಸ ಬಲ್ಲಾಳ ಜಾನಕಿ ದತ್ತಿ ನಿಧಿ, ಸೇಡಿಯಾಪು ಕೃಷ್ಣಭಟ್ಟರ ಬಗ್ಗೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಸಾಹಿತ್ಯವು ಇಡೀ ಸಮಾಜವನ್ನು ಕಟ್ಟುವ, ಸಂಸ್ಕೃತಿಯ ಹಿರಿಮೆಯನ್ನು ಬೆಳಗಿಸುವಂತಿರಬೇಕು ಎಂದಿದ್ದ ಅವರು ಅಕ್ಷರ, ವರ್ಣಗಳ ಬಗ್ಗೆ ಹಾಗೂ ಭಾಷಾ ವಿಚಾರಗಳ ಬಗ್ಗೆಯೂ ವಿಮರ್ಶೆ ಮಾಡಿದ್ದಾರೆ. ಆಧ್ಯಾತ್ಮದ ಬಗ್ಗೆಯೂ ಅವರ ಚಿಂತನೆ ಅಪೂರ್ವವಾದುದು. ಸಾಹಿತ್ಯದ ಬಗ್ಗೆ ಸುದೀರ್ಘವಾಗಿ ಚರ್ಚಿಸಿರುವುದನ್ನು ಅವರ ಬರವಣಿಗೆಯಲ್ಲಿ ಕಾಣಬಹುದು.
ಕುಮಾರ ವಿಜಯ ಪ್ರಸಂಗದ ಬಗ್ಗೆ, ತಾಳಮದ್ದಳೆಯ ಬಗ್ಗೆ ಅನೇಕ ವಿಚಾರ ವಿಮರ್ಶೆಗಳನ್ನು ಮಾಡಿರುವ ಅವರು ಯಕ್ಷಗಾನ ಕ್ಷೇತ್ರಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ ಎಂದರು.
ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ. ಸೋಮಣ್ಣ ಹೊಂಗಳ್ಳಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕರಾವಳಿ ಪಂಡಿತ ಪರಂಪರೆಗೆ ಹೆಸರಾದ ನಾಡು.ಅಂತಹ ಪರಂಪರೆಯ ಭಾಗವಾದ ಸೇಡಿಯಾಪು ಅವರು ಉತ್ತಮ ಕತೆಗಾರರು ಕೂಡ. ಅವರು ತಮ್ಮ ಕತೆಗಳಲ್ಲಿ ಪ್ರಭುತ್ವದ ವಿರುದ್ಧ ಧ್ವನಿಯೆತ್ತಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ.ನಾಗಪ್ಪ ಗೌಡ, ಡಾ.ಯಶುಕುಮಾರ್, ಗುಣಾಜೆ ರಾಮಚಂದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ಡಾ.ಧನಂಜಯ ಕುಂಬ್ಳೆ ಅವರು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಉಳ್ಳಾಲ ಘಟಕದ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು