ಬೆಳಗಾವಿ : ಬೆಳಗಾವಿಗೆ ರೈಲ್ವೆ ನಿಲ್ದಾಣಕ್ಕೆ ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳ ಹೆಸರನ್ನು ನಾಮಕರಣ ನಾಮಕರಣಗೊಳಿಸಲು ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಪಡೆದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಬೆಳಗಾವಿಯಲ್ಲಿ ಡಾ. ಶಿವಬಸವ ಸ್ವಾಮೀಜಿಯವರ 135 ನೆಯ ಜಯಂತಿ ಮಹೋತ್ಸವದ ಅಂಗವಾಗಿ ಜರುಗಿದ ಶ್ರೀ ಹಾನಗಲ್ಲ ಕುಮಾರ ಮಹಾಶಿಯೋಗಿಗಳವರ ಕಂಚಿನ ಪುತ್ಥಳಿ ಅನಾವರಣ ಮತ್ತು ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿವಬಸವ ಸ್ವಾಮೀಜಿಯವರ ದೂರ ದೃಷ್ಟಿಯ ಚಿಂತನೆಯಿಂದ ಜರುಗಿದ ಕಾರ್ಯಗಳಿಂದಾಗಿ ಮತ್ತು ಅವರ ತಪಸ್ಸಿನ ಫಲವಾಗಿ ಇಂದು ಕೇವಲ 40 ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ವಿಶ್ವದ ಭೂಪಟದಲ್ಲಿ ನಾಗನೂರು ಮಠ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ ದಕ್ಷಿಣದಲ್ಲಿ ತುಮಕೂರಿನ ಸಿದ್ದಗಂಗಾ ಮಠ ಮತ್ತು ಉತ್ತರದಲ್ಲಿ ನಾಗನೂರು ರುದ್ರಾಕ್ಷಿ ಮಠ ಎರಡು ಮಠಗಳ ಸ್ವಾಮೀಜಿಗಳ ಹೆಸರು ಸೂರ್ಯ ಚಂದ್ರರು ಇರುವವರೆಗೂ ಇರುವಂತಹವು ಎಂದವರು ನುಡಿದರು.
ಸುರೇಶ್ ಅಂಗಡಿ ಅವರ ಕನಸಿನ ಹುಬ್ಬಳ್ಳಿಯಿಂದ ಬೆಳಗಾವಿಯವರೆಗೆ ಪ್ರತ್ಯೇಕ ರೈಲು ಮಾರ್ಗ ಕೆ ಅಗತ್ಯವಿರುವ ಜಮೀನನ್ನು ಮಾರ್ಚ್ 31 ರೊಳಗೆ ರೈಲ್ವೆ ಇಲಾಖೆಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೆ ವಿನಂತಿ ಮಾಡಲಾಗುವುದು. ಮೇ ತಿಂಗಳೊಳಗೆ ಈ ಕಾಮಗಾರಿ ಕಾರ್ಯಾರಂಭ ಮಾಡಲಾಗುವುದು ಎಂದರು.ಸಾನ್ನಿಧ್ಯ ವಹಿಸಿದ್ದ ಆನಂದಪುರಂ ಮುರುಘಾಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ 12 ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ಯೋಜನೆಗಳೆಲ್ಲ ಕಾರ್ಯರೂಪಕ್ಕೆ ಬಂದಿದ್ದು 20 ನೇ ಶತಮಾನದಲ್ಲಿ. ಅದು ಹಾನಗಲ್ಲ ಕುಮಾರ ಮಹಾಶಿವಯೋಗಿಗಳಿಂದ ಎಂದು ಹೇಳಿದರು.
ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ.ಶಿವಬಸವ ಮಹಾಸ್ವಾಮಿಗಳು ಮಾಡಿದ ಕಾರ್ಯಗಳೆಲ್ಲವೂ ಮಾದರಿಯದಂತಹ ಕಾರ್ಯಗಳು. ಶಿವಬಸವ ಶ್ರೀಗಳು ಶ್ರೀಗಳಿಗೆ ಮಾದರಿಯದಂತಹ ಶ್ರೀಗಳಾಗಿದ್ದರು. ಮಿತ ಭಾಷಿಯಾಗಿದ್ದ ಅವರ ಮೌನವೇ ಎಲ್ಲ ಆದೇಶಗಳನ್ನು ಕೊಡುವಂತಿತ್ತು ಎಂದು ಬಣ್ಣಿಸಿದರು.
ಶ್ರೀ ಹಾನಗಲ್ಲ ಕುಮಾರ ಮಹಾಶಿವಯೋಗಿಗಳವರ ಕಂಚಿನ ಪುತ್ಥಳಿ ಅನಾವರಣಗೊಳಿಸಲಾಯಿತು. ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಬೆಟ್ಟದಪುರ ಸಲೀಲಾಖ್ಯ ವಿರಕ್ತಮಠದ ಶ್ರೀ. ಚನ್ನಬಸವ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ನೇತೃತ್ವವನ್ನು ಕಟಕೋಳ ಕುಮಾರೇಶ್ವರ ಮಠದ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು ವಹಿಸಿದ್ದರು. ಮಣಕವಾಡ ದೇವಮಂದಿರ ಮಹಾಮಠದ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳಿಗೆ ಶ್ರೀಮಠದಿಂದ ಗೌರವ ಸನ್ಮಾನವನ್ನು ಹಮ್ಮಿಕೊಳ್ಳಲಾಯಿತು. ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಹಾಗೂ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಉಪಸ್ಥಿತರಿದ್ದರು.
ವಿಶೇಷ ಆಹ್ವಾನಿತರಾಗಿ ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಶೆಟ್ಟರ್ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿದರು. ಎಸ್. ಜಿ. ಬಿ .ಐ. ಟಿ. ಮಹಾವಿದ್ಯಾಲಯದ ಹವಾನಿಯಂತ್ರಿತ ಸಭಾಭವನವನ್ನು ನೈಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಶೋಕ ಖೇಣಿ ನೆರವೇರಿಸಿದರು. ಶ್ರೀಮಠದಿಂದ ಕೊಡ ಮಾಡಲಾಗುವ “ಸೇವಾ ರತ್ನ ಪ್ರಶಸ್ತಿ ” ಯನ್ನು ವಿಧಾನಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮುಂಡರಗಿಯ ಮಾಜಿ ಸಚಿವ ಎಸ್. ಎಸ್. ಪಾಟೀಲ್, ಬೆಂಗಳೂರಿನ ಪಾಲನೆತ್ರ, ಬೆಳಗಾವಿಯ ಶೈಲಜಾ ಭಿಂಗೆ ಹಾಗೂ ಬೆಳಗಾವಿಯ ಕೆಂಪಣ್ಣಾ ರಾಮಾಪುರಿ ಮತ್ತು ಬೆಳಗಾವಿಯ ತಬಲಾ ವಾದಕ ಸತೀಶ್ ಗಚ್ಚಿ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಮುಳವಾಡದ ಹಿರಿಯ ಸಾಹಿತಿ ಫ.ಗು. ಸಿದ್ದಾಪುರ ವಿರಚಿತ ” ಮಹಾದಾಸೋಹಿ ಶಿವಬಸವ ” ಚೌಪದಿ ಮಹಾಕಾವ್ಯವನ್ನು ಮತ್ತು ಚಂದ್ರಶೇಖರ ಕಗ್ಗಲ್ಲುಗೌಡ್ರು ವಿರಚಿತ ” ಸ್ಪಿರಿಚುಯಾಲಿಟಿ ಇನ್ ಸಿಂಗಾಪುರ್ ” (ಲೈಫ್ ಸ್ಟೋರಿ ಆಫ್ ಎಂ.ಎಂ. ಸಾಖರೆ ) ಗ್ರಂಥಗಳು ಲೋಕಾರ್ಪಣೆಗೊಳಿಸಲಾಯಿತು.
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ ರೊಟ್ಟಿ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ನೀಲಗಂಗಾ ಚರಂತಿಮಠ ರಚಿಸಿ ಸಂಗೀತ ಸಂಯೋಜನೆ ಮಾಡಿದ ಶಿವಬಸವ ಶ್ರೀಗಳ ಕುರಿತಾದ ಗೀತೆಯನ್ನು ಅಕ್ಕನ ಬಳಗ ಮಾತೃ ಮಂಡಳಿ ಸದಸ್ಯರು ಹಾಡಿದರು. ಪ್ರಾಧ್ಯಾಪಕ ಎ.ಕೆ. ಪಾಟೀಲ್ ನಿರೂಪಿಸಿದರು. ವಿಜ್ಞಾನ ಕೇಂದ್ರದ ನಿರ್ದೇಶಕ ರಾಜಶೇಖರ ಪಾಟೀಲ ವಂದಿಸಿದರು.