ಬೆಳಗಾವಿ : ಪಶ್ಚಿಮ ಬಂಗಾಳದ ಕೋಲ್ಕತಾ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ಟ್ರೈನಿ ವೈದ್ಯೆಯ ಸಾಮೂಹಿಕ ಅತ್ಯಾಚಾರ ಹಾಗೂ ಬರ್ಬರ ಕೊಲೆಯನ್ನು ಖಂಡಿಸಿ ದೇಶಾದ್ಯಂತ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗೆ 24 ಗಂಟೆಗಳ ಕಾಲ ರಾಷ್ಟ್ರವ್ಯಾಪಿ ತುರ್ತು ವೈದ್ಯಕೀಯ ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲ ಹಿಂತೆಗೆದುಕೊಳ್ಳುವುದಾಗಿ ಭಾರತೀಯ ವೈದ್ಯಕೀಯ ಸಂಘ ಘೋಷಿಸಿದೆ. ಇದಕ್ಕೆ ಬೆಳಗಾವಿಯ ವೈದ್ಯೆ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್ ಬೆಂಬಲ ಸೂಚಿಸಿದ್ದಾರೆ.
ಕೋಲ್ಕತ್ತಾ ಘಟನೆಯನ್ನು ಖಂಡಿಸಿರುವ ಅವರು, ಆಗಸ್ಟ್ 17 ರಂದು ದೇಶಾದ್ಯಂತ ನಡೆಯಲಿರುವ ಶಾಂತಿಯುತ ಪ್ರತಿಭಟನೆಗೆ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಘಟನೆಯ ವಿರುದ್ಧ ವೈದ್ಯರು ಒಗ್ಗಟ್ಟಿನಿಂದ ಪ್ರತಿಭಟನೆ ನಡೆಸಲಿದ್ದಾರೆ. ದೇಶದ ಇತರ ಭಾಗಗಳಾದ ಕಥುವಾ ಮತ್ತು ಹತ್ರಾಸ್ನಲ್ಲಿ ಇದೇ ರೀತಿಯ ಘಟನೆಗಳನ್ನು ಖಂಡಿಸಿದವರು ಈ ಘಟನೆಯ ವಿರುದ್ಧವೂ ಮಾತನಾಡಬೇಕೆಂದು ಒತ್ತಾಯಿಸಿದ್ದಾರೆ.
ವೈದ್ಯಕೀಯ ಸಮುದಾಯದೊಂದಿಗೆ ಏಕತೆ ಮತ್ತು ಒಗ್ಗಟ್ಟಿಗೆ ಕರೆ ನೀಡಿದ ಅವರು, ಇದು ಒಟ್ಟಾಗಿ ನಿಂತು ನ್ಯಾಯಕ್ಕಾಗಿ ಬೇಡಿಕೆಯಿಡುವ ಸಮಯ. ಆಗಸ್ಟ್ 17 ರಂದು ಶಾಂತಿಯುತ ಪ್ರತಿಭಟನೆ ದೇಶದಾದ್ಯಂತ ವೈದ್ಯರು ಘಟನೆಯ ವಿರುದ್ಧ ಪ್ರತಿಭಟಿಸಲು ಮತ್ತು ಕ್ರಮಕ್ಕೆ ಒತ್ತಾಯಿಸಲು ಹಮ್ಮಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.