ಬೆಳ್ತಂಗಡಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಡಾ.ಡಿ. ವೀರೇಂದ್ರ ಹೆಗ್ಗಡೆ ಸಂಸದ್ ಭವನದ ಪ್ರಧಾನಿ ಕಚೇರಿಯಲ್ಲಿ ಭೇಟಿಯಾಗಿ, ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿರುವುದಕ್ಕೆ ಶುಭ ಹಾರೈಸಿದರು. ಶ್ರೀಕ್ಷೇತ್ರದ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದ ನೀಡಿ, ದೇಶಕ್ಕೆ ಇನ್ನಷ್ಟು ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಆಶೀರ್ವದಿಸಿದರು.

ರಾಜ್ಯಸಭಾ ಸಂಸದರ ನಿಧಿಯನ್ನು ಬೀದರ್‌ನಲ್ಲಿ ವಿನೂತನವಾಗಿ ವಿನಿಯೋಗಿಸಿ ಕ್ಷೀರಕ್ರಾಂತಿಗೆ ನಾಂದಿ ಹಾಡಿರುವ ಬಗ್ಗೆ ಪ್ರಧಾನಿಗೆ ಡಾ. ಹೆಗ್ಗಡೆ ಅವರು ವಿವರಿಸಿದರು. ಇದು ಒಂದು ಸಂಸದರ ನಿಧಿಯ ಮಾದರಿ ಸದ್ವಿನಿಯೋಗ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಗ್ರಾಮಾಭಿವೃದ್ಧಿ ಯೋಜನ ಯಿಂದ ನಿರ್ವಹಿಸಲ್ಪಡುತ್ತಿರುವ 10 ಸಾವಿರ ಸಿಎಸ್‌ಸಿ ಕೇಂದ್ರಗಳ ಮೂಲಕ ಕೇಂದ್ರ ಸರ್ಕಾರದ ಹಾಗೂ ಸಿಎಸ್‌ಸಿಯ ಪ್ರಮುಖ ಸೇವೆಗಳನ್ನು ಗ್ರಾಮೀಣ ಜನತೆಯ ಮನೆ ಬಾಗಿಲಿಗೆ ತಲುಪಿಸುತ್ತಿರುವುದನ್ನು ಡಾ. ಹೆಗ್ಗಡೆ ಅವರು ವಿವರಿಸಿದರು. ಇಲ್ಲಿಯವರೆಗೆ 3 ಕೋಟಿ ಸಿಎಸ್‌ಸಿ ಸೇವೆಗಳು ಯೋಜನೆ ಮೂಲಕ ಜನಸಾಮಾನ್ಯರಿಗೆ ತಲುಪಿರುವ ಬಗ್ಗೆ ಪ್ರಧಾನಿ ಅಚ್ಚರಿ ವ್ಯಕ್ತಪಡಿಸಿದರು. ಡಾ.ಹೆಗ್ಗಡೆ ಅವರ ಈ ಎಲ್ಲ ಸೇವೆಗಳ ಚಿಂತನೆ ದೇಶಕ್ಕೆ ಮಾದರಿ ಎಂದರು.

ಬೀದರ್‌ನಲ್ಲಿ ಕ್ಷೀರಕ್ರಾಂತಿಯನ್ನು ಯೋಜನೆ ಹಾಕಿಕೊಂಡು ಕೆಎಂಎಫ್ ಸಹಯೋಗದೊಂದಿಗೆ ಅನೇಕ ಹಾಲು ಒಕ್ಕೂಟಗಳನ್ನು ಅಭಿವೃದ್ಧಿಪಡಿಸಿ ಹೈನುಗಾರಿಕೆ ಮಾಡಲು ಪ್ರೋತ್ಸಾಹ ನೀಡಿದ್ದಾರೆ.

ಸಂಸದರ ನಿಧಿಯಿಂದ ಹಾಲು ಸಂಗ್ರಹಣಾ ಕಟ್ಟಡಗಳನ್ನು ನಿರ್ಮಿಸಿ ಹಾಲು ಸಂಗ್ರಹ ಹೆಚ್ಚಿಸಿಕೊಳ್ಳಲು ಅತ್ಯಾಧುನಿಕ ಯಂತ್ರಗಳಾದ ಆಟೋಮ್ಯಾಟಿಕ್ ಮಿಲ್ಕ್ ಕಲೆಕ್ಟಿಂಗ್ ಯೂನಿಟ್(ಎಎಂಸಿಯು), ಸ್ಟೈನ್‌ಲೆಸ್ ಸ್ಟೀಲ್ ಕ್ಯಾನ್, ಪ್ಯಾಟೋಮ್ಯಾಟಿಕ್ ಯಂತ್ರ, ಹಾಲು ತೂಕದ ಯಂತ್ರಗಳನ್ನು ಒದಗಿಸಿದ್ದಾರೆ. ಯೋಜನೆಯ ಕೃಷಿ ಅಧಿಕಾರಿಗಳನ್ನು ನಿಯೋಜಿಸಿ ಗ್ರಾಮೀಣ ರೈತರರಿಗೆ ಹೈನುಗಾರಿಕೆ ತರಬೇತಿ ನೀಡಿದ್ದಾರೆ. ಈ ಯೋಜನೆ ಪ್ರಾರಂಭ ಆಗುವ ಮುಂಚೆ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರತಿನಿತ್ಯ 18 ಸಾವಿರ ಲೀಟ‌ರ್ ಮಾತ್ರ ಇತ್ತು. ಇದು ಯೋಜನೆಯಿಂದಾಗಿ ಪ್ರತಿದಿನ ಗರಿಷ್ಠ 60 ಸಾವಿರ ಲೀಟರ್‌ಗೆ ಏರಿಕೆ ಕಂಡಿದ್ದು ಕೆಲವೇ ತಿಂಗಳಲ್ಲಿ ಪ್ರತಿನಿತ್ಯ 1 ಲಕ್ಷ ಲೀಟರ್ ಹಾಲು ಸಂಗ್ರಹದ ಗುರಿಯನ್ನು ತಲುಪಲಿದ್ದು ಇದೊಂದು ಐತಿಹಾಸಿಕ ಉತ್ಪಾದನೆ. ಸಂಸದರ ನಿಧಿಯ ಬಳಕೆಗೆ ಇದು ಮಾದರಿ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.