ಹೊರನಾಡು: ಹೊರನಾಡಿನ ಪ್ರಸಿದ್ಧ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇನ್ನು ಮುಂದೆ ವಸ್ತ್ರ ಸಂಹಿತೆ ಜಾರಿಯಾಗಲಿದೆ. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದವರಿಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಗಂಡಸರು ಮತ್ತು ಗಂಡು ಮಕ್ಕಳು ಶಲ್ಯ, ಪ್ಯಾಂಟ್, ಪಂಚೆ ಧರಿಸಿ ಬರಬೇಕು. ಹೆಂಗಸರು ಮತ್ತು ಹೆಣ್ಣು ಮಕ್ಕಳು ಸೀರೆ ಮತ್ತು ಚೂಡಿದಾರದಂಥ ಸಾಂಪ್ರದಾಯಿಕ ಉಡುಪು ಧರಿಸಿ ಬಂದರೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶಿಸುವಂತೆ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ ಎಂದು ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತ ಜಿ. ಭೀಮೇಶ್ವರ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಲವು ತಿಂಗಳ ಹಿಂದಷ್ಟೇ ಇನ್ನೊಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಶೃಂಗೇರಿ ಶಾರದಾ ಪೀಠದಲ್ಲಿ ಗುರುಗಳ ದರ್ಶನ, ಗುರುಗಳ ಪಾದಪೂಜೆ ಮತ್ತು ಗರ್ಭಗುಡಿ ಪ್ರವೇಶಿಸುವ ಭಕ್ತರು ಸಾಂಪ್ರದಾಯಿಕ ವಸ್ತ್ರ ತೊಟ್ಟು ಬರುವಂತೆ ಆಡಳಿತ ಮಂಡಳಿ ಆದೇಶಿಸಿತ್ತು.