ಶಿರಸಿ : ರಾಜ್ಯದ ದೊಡ್ಡ ಜಾತ್ರೆಗಳಲ್ಲಿ ಒಂದಾದ ಶಿರಸಿಯ ಮಾರಿಕಾಂಬಾ ಜಾತ್ರೆಯು ಮಾರಿ ದೇವಿಯ ರಥೋತ್ಸವದ ಮೂಲಕ ಅದ್ಧೂರಿ ಚಾಲನೆ ಪಡೆದುಕೊಂಡಿದೆ.

ಬುಧವಾರ ಮುಂಜಾನೆ ಸೂರ್ಯ ಭುವಿಯನ್ನು ಸ್ಪರ್ಶಿಸುವ ಮುನ್ನವೇ, ಮಾರಿಕಾಂಬಾ ದೇಗುಲದ ರಥಬೀದಿಯ ತುಂಬ ಜನದಟ್ಟಣೆ. ನಸುಕಿನಲ್ಲಿ ರಥಾರೂಢಳಾದ ಸರ್ವಾಲಂಕಾರಭೂಷಿತೆ ದೇವಿ ಶೋಭಾಯಾತ್ರೆಯಲ್ಲಿ ಬಿಡಕಿಬೈಲಿನಲ್ಲಿ ಜಾತ್ರಾ ಗದ್ದುಗೆಗೆ ತೆರಳಲಿದ್ದಾಳೆ.

ಮಾರಿಕಾಂಬಾ ದೇವಾಲಯದ ಎದುರಿನಿಂದ ಬೆಳಿಗ್ಗೆ 8.59ರ ಮುಹೂರ್ತದಲ್ಲಿ ಪ್ರಾರಂಭವಾದ ಶೋಭಾಯಾತ್ರೆಯಲ್ಲಿ ನಾಡಿನ ವಿವಿಧೆಡೆಯ ಅಸಂಖ್ಯ ಲಭಕ್ತರು ಪಾಲ್ಗೊಂಡಿದ್ದರು. ಬಿಡಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ಮಧ್ಯಾಹ್ನ ದೇವಿಯ ಪ್ರತಿಷ್ಠಾಪನೆ ನೆರವೇರಲಿದೆ.

ರಕ್ತ ಚಂದನ ವರ್ಣದ ಅಷ್ಟಭುಜಧಾರಿ, ಏಳು ಅಡಿ ಎತ್ತರದ ಮಾರಿಕಾಂಬೆ ಸಕಲ ಆಭರಣಗಳನ್ನು ತೊಟ್ಟು ಕಲ್ಯಾಣಿಯಾಗಿ, ರಥದಲ್ಲಿ ಕುಳಿತು ಕಿಕ್ಕಿರಿದು ಸೇರುವ ಭಕ್ತರ ನಡುವೆ ನಿಧಾನವಾಗಿ ಬಳುಕುತ್ತ ಸಾಗುವುದನ್ನು ಕಣ್ತುಂಬಿಕೊಳ್ಳುವುದೇ ಅಪೂರ್ವ ಕ್ಷಣ. ಸಾತ್ವಿಕ ದೇವಿ ಮಾರಿಕಾಂಬಾ ಮೆರವಣಿಗೆಯಲ್ಲಿ ಸಾಗುವಾಗ ಜನರು ದುಡ್ಡು, ಬಾಳೆಹಣ್ಣನ್ನು ರಥಕ್ಕೆ ಎಸೆದು ಕೃತಾರ್ಥರಾದರೆ, ಲಂಬಾಣಿ ಮಹಿಳೆಯರು ಸೋಬಾನೆ ಪದ ಹೇಳುತ್ತ ದೇವಿಗೆ ಸೇವೆ ಸಲ್ಲಿಸುತ್ತಾರೆ. ದೇವಿಯನ್ನು ಆವಾಹನೆ ಮಾಡಿಕೊಂಡ ಮಹಿಳೆಯರು ಆವೇಷಭರಿತರಾಗಿ ಕುಣಿಯುತ್ತಾರೆ.