ಬೆಂಗಳೂರು : ಕರ್ನಾಟಕ ಸಾರಿಗೆ ಇಲಾಖೆಯ (ಕೆಎಸ್ ಆರ್ ಟಿಸಿ, ಬಿಎಂಟಿಸಿ, ಎನ್ ಡಬ್ಲ್ಯೂ ಕೆಆರ್ ಟಿ ಸಿ, ಕೆ ಕೆ ಆರ್ ಟಿಸಿ) ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ವೇಳೆ ಇನ್ನು ಮುಂದೆ ರೀಲ್ಸ್ ಮಾಡಿದರೆ ಅಂಥವರನ್ನು ಮುಲಾಜಿಲ್ಲದೆ ಕೆಲಸದಿಂದ ತೆಗೆಯಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಪತ್ರಕರ್ತರ ಜೊತೆ ಮಾತನಾಡಿದ ಅವರು, ರೀಲ್ಸ್ ಮಾಡಿದವರು ಕೆಲಸದಲ್ಲಿ ಇರಲು ಲಾಯಕ್ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೇ ತಿಂಗಳಲ್ಲಿ ಚಾಲಕ ಛತ್ರಿ ಹಿಡಿದುಕೊಂಡು ಬಸ್ ಓಡಿಸುತ್ತಿದ್ದ. ನಿರ್ವಾಹಕಿ ವಿಡಿಯೋ ಸೆರೆ ಹಿಡಿದ್ದರು. ವಿಡಿಯೋ ವೈರಲ್ ಆಗಿತ್ತು ಬೆಟಗೇರಿ ಮತ್ತು ಧಾರವಾಡ ಮಾರ್ಗದಲ್ಲಿ ಚಾಲಕರಾಗಿದ್ದ ಹನುಮಂತಪ್ಪ ಕಿಲ್ಲೆದಾರ್ ಮತ್ತು ನಿರ್ವಾಹಕಿ ಅನಿತಾ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ ಹೊತ್ತು ಮಳೆ ಬರುತ್ತಿದ್ದಾಗ ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೆ ಇದ್ದಾಗ ಚಾಲಕ ಛತ್ರಿ ಹಿಡಿದು ಬಸ್ ಚಲಾಯಿಸಿದ್ದರು. ವಿಡಿಯೋ ವೈರಲ್ ಆದ ನಂತರ ಬಿಜೆಪಿ ಇನ್ನಿಲ್ಲದಂತೆ ಸರಕಾರವನ್ನು ಟೀಕಿಸಿತ್ತು. ಸರಕಾರಕ್ಕೆ ತೀವ್ರ ಮುಜುಗರವಾಗಿತ್ತು. ಕೊನೆಗೂ ಸಾರಿಗೆ ಸಂಸ್ಥೆ ತನಿಖೆ ನಡೆಸಿದಾಗ ಇದು ಮನರಂಜನೆಗೆ ಮಾಡಿದ ವಿಡಿಯೋ ಎಂದು ಗೊತ್ತಾಗಿತ್ತು.

ಇನ್ನೊಂದು ಘಟನೆ :
ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಹೊರಟಿದ್ದ ಸಾರಿಗೆ ಸಂಸ್ಥೆ ಬಸ್ ಚಾಲಕ ರೀಲ್ಸ್ ಮಾಡಲು ಆರಂಭಿಸಿದ್ದ. ಆಗ ಚಕ್ಕಡಿಯನ್ನು ಗಮನಿಸದೆ ಆದ ಅದಕ್ಕೆ ಡಿಕ್ಕಿ ಹೊಡೆದಿದ್ದ. ಎರಡು ಎತ್ತು ಸ್ಥಳದಲ್ಲಿಯೇ ಮೃತಪಟ್ಟರೆ, ರೈತನ ಮೆದುಳು ನಿಷ್ಕ್ರಿಯವಾಗಿತ್ತು. ಈ ಹಿನ್ನಲೆಯಲ್ಲಿ ಇದೀಗ ರಾಜ್ಯ ಸರಕಾರ ಚಾಲಕರು ಹಾಗೂ ನಿರ್ವಾಹಕರಿಗೆ ಯಾವುದೇ ಕಾರಣಕ್ಕೂ ರೀಲ್ಸ್ ಮಾಡದಂತೆ ಎಚ್ಚರಿಕೆ ರವಾನಿಸಿದೆ.