ದೆಹಲಿ:
ದಂಪತಿಗಳ ನಡುವಿನ ಜಗಳದಿಂದಾಗಿ ಜರ್ಮನಿಯ ಮ್ಯೂನಿಕ್‌ನಿಂದ ಥಾಯ್ಲೆಂಡ್‌ನ ಬ್ಯಾಂಕಾಕ್‌ನತ್ತ ಹೊರಟಿದ್ದ ಲುಫ್ತಾನ್ಸಾ ಏರ್‌ಲೈನ್ಸ್‌ನ ವಿಮಾನ ಮಾರ್ಗ ಬದಲಿಸಿ ದೆಹಲಿಯಲ್ಲಿ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಂಪತಿಗಳ ಜಗಳ ತಾರಕಕ್ಕೇರಿದಾಗ, ದೆಹಲಿಯ ಇಂದಿರಾ ಗಾಂದಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಲುಫ್ತಾನ್ಸಾ ಏರ್‌ಲೈನ್ಸ್‌ನ LH772 ವಿಮಾನ ಇಳಿಸಲಾಯಿತು.

ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿದ ಏರ್‌ಲೈನ್ಸ್, ದೆಹಲಿಯಲ್ಲಿ ವಿಮಾನ ಇಳಿಸಲು ಅನುಮತಿ ಕೋರಿದರು.

ಥಾಯ್ಲೆಂಡ್ ಮೂಲದ ಪತ್ನಿ ಜರ್ಮನಿಯ ಮೂಲದ ಪತಿಯ ವರ್ತನೆಯ ಬಗ್ಗೆ ಪೈಲಟ್‌ಗೆ ದೂರು ನೀಡಿದರು. ಆತನಿಂದ ತನಗೆ ಬೆದರಿಕೆಯಿದ್ದು, ಮಧ್ಯಪ್ರವೇಶಿಸಬೇಕೆಂದು ಕೋರಿರುವುದಾಗಿ ಲುಫ್ತಾನ್ಸಾ ಏರ್‌ಲೈನ್ಸ್‌ ತಿಳಿಸಿದೆ.

ವಿಮಾನದಲ್ಲಿರುವ ಪ್ರಯಾಣಿಕರ ಭದ್ರತೆಗೆ ಮೊದಲ ಆದ್ಯತೆಯಾಗಿದೆ ಎಂದು ಏರ್‌ಲೈನ್ಸ್ ತಿಳಿಸಿದೆ. ಜರ್ಮನಿಯ 53 ವರ್ಷದ ಪ್ರಯಾಣಿಕ, ಆಹಾರ ಎಸೆದು, ಲೈಟರ್ ಮೂಲಕ ಹೊದಿಕೆ ಸುಡಲು ಯತ್ನಿಸಿದನು. ಸಿಬ್ಬಂದಿಯ ಯಾವುದೇ ಸೂಚನೆಗಳನ್ನು ಪಾಲಿಸಲಿಲ್ಲ. ಬಳಿಕ ಸಿಐಎಸ್‌ಎಫ್ ನೆರವಿನಿಂದ ವಿಮಾನದಿಂದ ಪ್ರಯಾಣಿಕನನ್ನು ಇಳಿಸಲಾಯಿತು ಎಂದು ಏರ್‌ಲೈನ್ಸ್ ತಿಳಿಸಿದೆ.

ಪ್ರತ್ಯೇಕ ಪಿಎನ್‌ಆರ್ ಟಿಕೆಟ್‌ನಲ್ಲಿ ಪ್ರಯಾಣಿಸುತ್ತಿದ್ದ ಆತನ ಪತ್ನಿ ಬ್ಯಾಂಕಾಕ್‌ನತ್ತ ಪಯಣ ಬೆಳೆಸಲು ಇಂಗಿತ ವ್ಯಕ್ತಪಡಿಸಿದರು. ಮುಂದಿನ ಕ್ರಮಕ್ಕಾಗಿ ಭಾರತದಲ್ಲಿರುವ ಜರ್ಮನಿಯ ರಾಯಭಾರಿಯನ್ನು ಸಂಪರ್ಕಿಸಲಾಗಿದೆ ಎಂದು ಏರ್‌ಲೈನ್ಸ್ ತಿಳಿಸಿದೆ.

ಅಶಿಸ್ತಿನಿಂದ ವರ್ತಿಸಿದ ಪ್ರಯಾಣಿಕನನ್ನು ದೆಹಲಿ ಪೊಲೀಸರಿಗೆ ಒಪ್ಪಿಸುವ ಅಥವಾ ಆತನ ಕ್ಷಮೆಯಾಚನೆ ಪುರಸ್ಕರಿಸಿ ಮತ್ತೊಂದು ವಿಮಾನದಲ್ಲಿ ಜರ್ಮನಿಗೆ ಕಳುಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.