ಬೆಳಗಾವಿ :
ಬೆಳಗಾವಿಯಲ್ಲಿ ಜನತಾದರ್ಶನ ಕಾರ್ಯಕ್ರಮ ಏರ್ಪಡಿಸುವಂತೆ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆಸಿದ ಜನತಾ ದರ್ಶನವು ಸಾವಿರಾರು ಜನರ ಸಮಸ್ಯೆಗಳ ಪರಿಹಾರಕ್ಕೆ ವೇದಿಕೆಯಾಗಿ ಪರಿಣಮಿಸಿದೆ. ಕೇವಲ ಮನವಿಗಳನ್ನು ಸ್ವೀಕರಿದೇ ಸ್ಥಳದಲ್ಲಿಯೇ ಪರಿಹಾರ ಒದಗಿಸಿದ್ದು ನಿಮ್ಮ ಜನತಾ ದರ್ಶನದ ಹೊಸ ಹೆಜ್ಜೆಯಾಗಿದೆ. ಸಾವಿರಾರು ಸಮಸ್ಯೆಗಳನ್ನು ಬೆಂಗಳೂರಿನವರಿಗೆ ಹೊತ್ತು ತಂದಿದ್ದ ಜನರ ಪೈಕಿ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಜನರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡೇ ಮರಳಿದ್ದಾರೆ. ಆದರೆ ಬೆಂಗಳೂರಿನವರಿಗೆ ಹೋಗಲು ವೆಚ್ಚ ಮಾಡಲಾಗದ ಸಹಸ್ರಾರು ಜನರು ಬೆಳಗಾವಿಯಲ್ಲಿ ಸದ್ಯ ನಡೆದಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನಕ್ಕಾಗಿ ದಾರಿ ಕಾಯುತ್ತಿದ್ದರು. ಈಗ ಅಧಿವೇಶನವು ನಡೆದಿದೆ.

ಈ ಹಿನ್ನೆಲೆಯಲ್ಲಿ ತಾವು ಬೆಳಗಾವಿಯಲ್ಲಿ “ಬೆಂಗಳೂರು ಮಾದರಿಯ” ಜನತಾ ದರ್ಶನವನ್ನು ಆಯೋಜಿಸಿದರೆ ಉತ್ತರ ಕರ್ನಾಟಕದ ಸಾವಿರಾರು ಜನರಿಗೆ ಅನಕೂಲವಾಗುತ್ತದೆ. ಇಡೀ ರಾಜ್ಯ ಸರಕಾರವೇ ಬೆಳಗಾವಿಯಲ್ಲಿ ಬೀಡು ಬಿಟ್ಟಿರುವದರಿಂದ ಸಾವಿರಾರು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಿಗುವ ಸಾಧ್ಯತೆಯಿದೆ. ಇಂತಹ ಜನತಾ ದರ್ಶನವನ್ನು ಸುವರ್ಣ ಸೌಧದಲ್ಲಿ ನಡೆಸದೇ ಬೆಳಗಾವಿ ಮಹಾನಗರದಲ್ಲಿರುವ ಸಭಾಂಗಣ ಅಥವಾ ಸರ್ಕೀಟ್ ಹೌಸ್ ಆವರಣದಲ್ಲಿ ನಡೆಸಬಹುದಾಗಿದೆ. ಆದ್ದರಿಂದ ತಾವು ಅಧಿವೇಶನ ಅಂತ್ಯಗೊಳ್ಳುವ ಎರಡು ಮೂರು ದಿನಗಳಷ್ಟು ಮೊದಲೇ ಜನತಾ ದರ್ಶನವನ್ನು ನಡೆಸಬೇಕೆಂದು ಕೋರುತ್ತೇವೆ
ಎಂದು ಕನ್ನಡ ಸಂಘಟನೆಗಳು ಒತ್ತಾಯಿಸಿವೆ.