ದೆಹಲಿ: ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇದೆ. ಕೆಲವೇ ದಿನಗಳಲ್ಲಿ ದಿನಾಂಕಗಳು ಪ್ರಕಟಗೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಚುನಾವಣಾ ಆಯುಕ್ತರಲ್ಲಿ ಒಬ್ಬರಾದ ಅರುಣ್ ಗೋಯೆಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಭಾರತದ ಚುನಾವಣಾ ಆಯೋಗದಲ್ಲಿ ಈಗಾಗಲೇ ಒಂದು ಹುದ್ದೆ ಖಾಲಿ ಇದೆ. ಈಗ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತ್ರ ಉಳಿದುಕೊಂಡಿದ್ದಾರೆ.

ಮುಂದಿನ ವಾರ ಲೋಕಸಭಾ ಚುನಾವಣಾ ದಿನಾಂಕಗಳನ್ನು ಘೋಷಿಸುವ ಸಾಧ್ಯತೆಯಿದೆ. ಈ ನಡುವೆ ಗೋಯೆಲ್ ರಾಜೀನಾಮೆಯಿಂದ ಆ ಸಮಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ನೋಡಬೇಕು.

1985ರ ಬ್ಯಾಚ್ ನ ಪಂಜಾಬ್ ಕೇಡರ್ ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಬೃಹತ್ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿಯಾಗಿ ಅಧಿಕಾರಾವಧಿಯನ್ನು ಡಿಸೆಂಬರ್ 31ಕ್ಕೆ ಮುಕ್ತಾಯಗೊಳಿಸಬೇಕಿತ್ತು. ನಿಗದಿತ ನಿವೃತ್ತಿಗೆ ಆರು ವಾರಗಳ ಮೊದಲು ಗೋಯೆಲ್ ಸೇವೆಯಿಂದ ಸ್ವಯಂ ನಿವೃತ್ತಿಯನ್ನು (ವಿಆರ್​ಎಸ್​) ಪಡೆದುಕೊಂಡಿದ್ದರು. ನಂತರ ಅವರನ್ನು ಚುನಾವಣಾ ಆಯುಕ್ತರಾಗಿ ನೇಮಿಸಲಾಯಿತು. ಸುಶೀಲ್ ಚಂದ್ರ ಅವರ ನಿವೃತ್ತಿಯಿಂದ ತೆರವಾದ ಸ್ಥಾನವನ್ನು ತುಂಬಿದ್ದರು.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023 ರ ಸೆಕ್ಷನ್ 11 ರ ಷರತ್ತು (1) ಕ್ಕೆ ಅನುಸಾರವಾಗಿ, ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಸಲ್ಲಿಸಿದ ರಾಜೀನಾಮೆಯನ್ನು 2024 ರ ಮಾರ್ಚ್ 09 ರಿಂದ ಜಾರಿಗೆ ಬರುವಂತೆ ರಾಷ್ಟ್ರಪತಿಗಳು ಸ್ವೀಕರಿಸಿದ್ದಾರೆ ಎಂದು ಕಾನೂನು ಸಚಿವಾಲಯ ಶನಿವಾರ ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ದೇಶಾದ್ಯಂತ ಭದ್ರತಾ ಸಿಬ್ಬಂದಿಯ ನಿಯೋಜನೆ ಮತ್ತು ಸಂಚಾರ ವ್ಯವಸ್ಥೆ ಕುರಿತು ಚರ್ಚಿಸಲು ಚುನಾವಣಾ ಆಯೋಗ ಶುಕ್ರವಾರ ಕೇಂದ್ರ ಗೃಹ ಸಚಿವಾಲಯ ಮತ್ತು ರೈಲ್ವೆ ಅಧಿಕಾರಿಗಳೊಂದಿಗೆ ಭದ್ರತಾ ಸಭೆ ನಡೆಸಿತು. ಲೋಕಸಭಾ ಚುನಾವಣೆಯ ಜೊತೆಗೆ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ಚುನಾವಣೆಯನ್ನೂ ಆಯೋಗ ನಡೆಸಲಿದೆ.