ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಅವರು ಎಲೋನ್ ಮಸ್ಕ್ ಅವರು ‘ಸರ್ಕಾರಿ ದಕ್ಷತೆಯ ಇಲಾಖೆ’ಯನ್ನು ಮುನ್ನಡೆಸಲಿದ್ದಾರೆ ಎಂದು ಪ್ರಕಟಿಸಿದ್ದಾರೆ. ಮಸ್ಕ್ ಹಾಗೂ ಭಾರತೀಯ-ಅಮೆರಿಕನ್ ಉದ್ಯಮಿ ವಿವೇಕ ರಾಮಸ್ವಾಮಿ ಅವರು ಈ ವಿಭಾಗದ ಮುಖ್ಯಸ್ಥರಾಗಿರುತ್ತಾರೆ ಎಂದು ಪ್ರಕಟಿಸಿದ್ದಾರೆ,
“ಈ ಇಬ್ಬರು ಅದ್ಭುತ ಅಮೆರಿಕನ್ನರು ಒಟ್ಟಾಗಿ, ಸರ್ಕಾರಿ ಅಧಿಕಾರಶಾಹಿಯನ್ನು ಕಿತ್ತೊಗೆಯಲು, ಹೆಚ್ಚುವರಿ ನಿಯಮಾವಳಿಗಳನ್ನು ಕಡಿತಗೊಳಿಸಲು, ವೆಚ್ಚಗಳನ್ನು ಕಡಿತಗೊಳಿಸಲು ಮತ್ತು ಫೆಡರಲ್ ಏಜೆನ್ಸಿಗಳನ್ನು ಪುನರ್ರಚಿಸಲು ನನ್ನ ಆಡಳಿತಕ್ಕೆ ದಾರಿ ಮಾಡಿಕೊಡುತ್ತಾರೆ – ‘ಅಮೆರಿಕವನ್ನು ಉಳಿಸಿ’ ಆಂದೋಲನಕ್ಕೆ ಇದು ಅವಶ್ಯಕ” ಎಂದು ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಎಲಾನ್ ಮತ್ತು ವಿವೇಕ ಅವರ ದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಫೆಡರಲ್ ಬ್ಯೂರೋಕ್ರಸಿಯಲ್ಲಿ ಬದಲಾವಣೆಗಳನ್ನು ಮಾಡುವುದನ್ನು ನಾನು ಎದುರು ನೋಡುತ್ತಿದ್ದೇನೆ ಮತ್ತು ಇದು ಎಲ್ಲ ಅಮೆರಿಕನ್ನರ ಜೀವನ ಉತ್ತಮಗೊಳಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಕಳೆದ ವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರನ್ನು 69 ಚುನಾವಣಾ ಮತಗಳಿಂದ ಸೋಲಿಸಿದರು.ತನ್ನ ವಿಜಯದ ಭಾಷಣದಲ್ಲಿ, ಟ್ರಂಪ್ ಅವರು ಉದ್ಯಮಿ ಮಸ್ಕ್ ಅವರನ್ನು ಹೊಗಳಿದರು ಮತ್ತು ಅವರನ್ನು “ಅದ್ಭುತ ಮತ್ತು ಸೂಪರ್ ಜೀನಿಯಸ್ ವ್ಯಕ್ತಿ” ಎಂದು ಬಣ್ಣಿಸಿದರು.
ಟ್ರಂಪ್ ಅವರ ಕಟ್ಟಾ ಬೆಂಬಲಿಗರಾಗಿದ್ದ ಮಸ್ಕ್ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಪ್ರಚಾರದ ಪ್ರಮುಖ ಭಾಗವಾಗಿದ್ದರು. ಟ್ರಂಪ್‌ರ ಮರು-ಚುನಾವಣೆಯ ಪ್ರಚಾರಕ್ಕೆ ಮಸ್ಕ್ ಅವರು 100 ಮಿಲಿಯನ್ ಡಾಲರ್‌ಗಳನ್ನು ದೇಣಿಗೆ ನೀಡಿದರು ಮತ್ತು ಅವರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್) ಬಳಸಿಕೊಂಡು ಟ್ರಂಪ್ ಪರವಾಗಿ ಭಾರಿ ಪ್ರಚಾರ ಮಾಡಿದರು.