ಬೆಂಗಳೂರು : ಶಿವಮೊಗ್ಗ ಜಿಲ್ಲೆಯ ಸಾಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಪೊಲೀಸರು ತನಗೆ ಕಿರುಕುಳ ನೀಡುತ್ತಿದ್ದು, ನಾನು ನ್ಯಾಯಾಲಯ ಬಿಟ್ಟು ಹೋಗುವುದಿಲ್ಲ. ನನ್ನನ್ನು ಕಾಪಾಡಿ” ಎಂದು ಸಾಗರದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಒಬ್ಬರು ಮಂಗಳವಾರ ಕರ್ನಾಟಕ ಹೈಕೋರ್ಟ್ ಮುಂದೆ ಕೈಮುಗಿದು ಅಂಗಲಾಚಿದ್ದಾರೆ.
ಇದರಿಂದ ಅಚ್ಚರಿಗೊಂಡ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಅವರ ನಿವೇದನೆಯನ್ನು ಸಾವಧಾನದಿಂದ ಆಲಿಸಿ “ಇಂಥ ಕೃತ್ಯದಿಂದ ಹಿಂದೆ ಸರಿಯುವಂತೆ ಡಿವೈಎಸ್‌ಪಿಗೆ ಸೂಚಿಸಿದ್ದು, ಇಲ್ಲವಾದರೆ ಅವರನ್ನು ನ್ಯಾಯಾಲಯಕ್ಕೆ ಕರೆಯಿಸಬೇಕಾಗುತ್ತದೆ. ಆರೋಪ ನಿಜವಾಗಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಖಡಕ್ ಮೌಖಿಕ ಎಚ್ಚರಿಕೆ ನೀಡಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಈ ವಿಚಾರವನ್ನು ಅಧಿಕಾರಿಗೆ ತಿಳಿಸುವಂತೆ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ ಅವರಿಗೆ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.
ವರದಿ ಪ್ರಕಾರ, ನ್ಯಾಯಮೂರ್ತಿ ನಾಗಪ್ರಸನ್ನ ಅವರ ಮುಂದೆ ಕೈಮುಗಿದು ಹಾಜರಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಸಹಾಯಕ ಎಂಜಿನಿಯರ್ ಆಗಿರುವ ಶಾಂತಕುಮಾರಸ್ವಾಮಿ ಎಂ. ಜಿ. ಎಂಬವರು “ನನಗೆ ವಿವಾಹ ನಿಶ್ಚಯವಾಗಿ ರದ್ದಾಗಿತ್ತು. ಆನಂತರ ಸುಳ್ಳು ಪ್ರಕರಣ ದಾಖಲಿಸಿ, ನನ್ನಿಂದ ಹಣ ಪೀಕಲು ಸ್ಥಳೀಯ ಕಾಂಗ್ರೆಸ್ ಶಾಸಕರು ಮತ್ತು ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ರೆಕಾರ್ಡ್ ಮಾಡಿ, ನಾನು ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ಲೋಕಾಯುಕ್ತಕ್ಕೆ ದೂರು ನೀಡಿದ್ದೀಯಾ ಎಂದು ಸಾಗರದಲ್ಲಿ ಇರಲು ನನ್ನನ್ನು ಬಿಡುತ್ತಿಲ್ಲ. ಅಲ್ಲಿಂದ ಬೆಂಗಳೂರಿಗೆ ವರ್ಗಾವಣೆ ಕೋರುತ್ತಿದ್ದು, ಅದೂ ಸಾಧ್ಯವಾಗಿಲ್ಲ ಎಂದು ನಿವೇದಿಸಿಕೊಂಡರು.ಸಾಗರದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯು ಜುಲೈ 22ರಂದು ಹೈಕೋರ್ಟ್‌ನಲ್ಲಿ (ನ್ಯಾ. ನಾಗಪ್ರಸನ್ನ ಪೀಠ) ನಡೆದಿತ್ತು. ಪಾರ್ಟಿ ಇನ್ ಪರ್ಸನ್ ಆಗಿ ಈ ಪ್ರಕರಣಗಳಲ್ಲಿ ವಿಚಾರಣೆಯಲ್ಲಿ ಭಾಗಿಯಾಗಿದ್ದು, ವಕೀಲರನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದ್ದರಿಂದ, ಹೊಸದಾಗಿ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ಕಲ್ಪಿಸಿ ಅರ್ಜಿ ವಿಲೇವಾರಿ ಮಾಡಲಾಗಿತ್ತು. ಈ ಸಂಬಂಧ ಯೂಟ್ಯೂಬ್‌ನಲ್ಲಿನ ಲೈವ್ ಸ್ಟ್ರೀಮ್ ವೀಡಿಯೊ ಆಧರಿಸಿ, ತಕ್ಷಣ ಸುಳ್ಳು ಗಾಂಜಾ ಪ್ರಕರಣದಲ್ಲಿ ನನ್ನನ್ನು ಬಂಧಿಸಿ ಶಿವಮೊಗ್ಗ ಜೈಲಿಗೆ ಅಟ್ಟಿದ್ದರು” ಎಂದು ನ್ಯಾಯಮೂರ್ತಿಗಳ ಮುಂದೆ ವಿವರಿಸಿದ್ದಾರೆ.
“ಹೈಕೋರ್ಟ್‌ನಲ್ಲಿ ಪೊಲೀಸರ ಬಗ್ಗೆ ದೂರುತ್ತೀಯಾ? ಎಂದು ಸಾಗರದ ಡಿವೈಎಸ್‌ಪಿ ನನ್ನನ್ನು ದಂಡಿಸಿದ್ದಾರೆ. ಗಾಂಜಾ ಪ್ರಕರಣದ ಜೊತೆಗೆ ತಕ್ಷಣ ಬೇರೆ ಬೇರೆ ಸೆಕ್ಷನ್ ಅನ್ವಯಿಸಿದ್ದಾರೆ. ರೌಡಿ ಶೀಟರ್ ತೆರೆಯಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ಮೊಬೈಲ್ ಮತ್ತು ಪರ್ಸ್ ಕಸಿದುಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
ಆಗ ಪೀಠವು “ಇದೆಲ್ಲವನ್ನೂ ರೆಕಾರ್ಡ್ ಮಾಡಲಾಗುತ್ತದೆ. ಡಿವೈಎಸ್‌ಪಿ ಈ ರೀತಿ ನಡೆದುಕೊಂಡಿದ್ದರೆ ಖಂಡಿತಾಗಿಯೂ ಅವರ ಮೇಲೆ ಕ್ರಮಕ್ಕೆ ನಿರ್ದೇಶಿಸಲಾಗುವುದು ಎಂದು ತಿಳಿಸಿದರು.ಹೆದರಬೇಡಿ, ನಾವು ಅವರಿಗೆ ಹೇಳಿದ್ದೇವೆ” ಎಂದರು. ಮಂಗಳವಾರ ವಿಚಾರಣೆ ನಡೆಸಲಾಗುವುದು ಎಂದು ಪೀಠ ಹೇಳಿದೆ.
ಪೀಠವು ಹಿಂದೆ ದಾಖಲಿಸಿದ್ದ ಪ್ರಕರಣದ ದಾಖಲೆಗಳನ್ನು ಮಂಗಳವಾರ ಪೀಠದ ಮುಂದೆ ಮಂಡಿಸುವಂತೆ ಸೂಚಿಸಿತು.