ಬೆಳಗಾವಿ: ರಾಜ್ಯದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಈಗ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ. ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ವಿದ್ಯಾಶಂಕರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಅಮೆರಿಕದಲ್ಲಿ ಶಾಲಾ ಹಂತದಲ್ಲಿಯೇ ಫಾಸ್ಟ್ ಟ್ರ್ಯಾಕ್ ವ್ಯವಸ್ಥೆ ಇದೆ. ನಾವೀಗ ಅದನ್ನು ಎಂಜಿನಿಯರಿಂಗ್ ಮತ್ತು ಬಿಟೆಕ್ ಕೋರ್ಸ್ ನಲ್ಲಿ ಅನುಷ್ಠಾನಕ್ಕೆ ತರುತ್ತಿದ್ದೇವೆ. ವಿದ್ಯಾರ್ಥಿ ಶಿಕ್ಷಣ ಆರು ತಿಂಗಳ ಮುಂಚಿತವಾಗಿ ಪೂರ್ಣಗೊಳ್ಳುವುದರಿಂದ ಬೇಗನೆ ಉದ್ಯೋಗಕ್ಕೆ ಸೇರಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಅನುಕೂಲವಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಅದರ ಸಂಯೋಜಿತ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಮತ್ತು ಬಿ ಟೆಕ್ ಓದುತ್ತಿರುವ ಅಸಾಮಾನ್ಯ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗಿಂತ ಒಂದು ಸೆಮಿಸ್ಟರ್ ಮೊದಲೇ ಇಂಜಿನಿಯರಿಂಗ್ ಪದವಿ ಪೂರೈಸುವ ಅವಕಾಶ ಲಭಿಸಿದೆ. 2022 ರಲ್ಲಿ ಎಂಜಿನಿಯರಿಂಗ್ ಪ್ರವೇಶ ಪಡೆದ ಬ್ಯಾಚಿನಿಂದ ಜಾರಿಯಾಗಲಿದೆ. ಮುಂದಿನ ಜುಲೈಯಲ್ಲಿ ಈ ವಿದ್ಯಾರ್ಥಿಗಳು ಏಳನೇ ಸೆಮಿಸ್ಟರ್ ಪ್ರವೇಶ ಪಡೆಯಲಿದ್ದಾರೆ. ಆಗ ಅವರು ತಮ್ಮ ಎಂಟನೇ ಸೆಮಿಸ್ಟರ್ ಅನ್ನು ಸಹ ಏಳನೇ ಸೆಮಿಸ್ಟರ್ ಜೊತೆ ಫಾಸ್ಟ್ ಟ್ರ್ಯಾಕ್ ಆಗಿ ಪೂರೈಸಬಹುದು. ಎರಡು ಮತ್ತು ಮೂರನೇ ಸೆಮಿಸ್ಟರ್ ನಲ್ಲಿ ಒಂಬತ್ತು ಮತ್ತು ಅದಕ್ಕಿಂತ ಹೆಚ್ಚು ಸಿಜಿಪಿಎ ಹೊಂದಿರುವ ಯಾವುದೇ ಸೆಮಿಸ್ಟರ್ ನಲ್ಲಿ ಯಾವುದೇ ವಿಷಯವನ್ನು ಬಾಕಿ ಉಳಿಸಿಕೊಳ್ಳದ ವಿದ್ಯಾರ್ಥಿಯನ್ನು ಅಸಾಮಾನ್ಯ ವಿದ್ಯಾರ್ಥಿ ಎಂದು ಪರಿಗಣಿಸಲಾಗುತ್ತದೆ. ವಿದ್ಯಾರ್ಥಿ 4ನೇ ಸೆಮಿಸ್ಟರ್ ನಲ್ಲಿ ನಿಗದಿತ ಶುಲ್ಕ ಪಾವತಿಸಿ ತಮ್ಮ ಪ್ರಾಚಾರ್ಯರ ಮೂಲಕ ವಿಶ್ವವಿದ್ಯಾಲಯದಲ್ಲಿ ಫಾಸ್ಟ್ರ್ಯಾಕ್ ಡಿಗ್ರಿಗೆ ನೋಂದಾಯಿಸಿಕೊಳ್ಳಬೇಕು. 5ನೇ ಸೆಮಿಸ್ಟರ್ ನಲ್ಲಿ ಇತರ ವಿದ್ಯಾರ್ಥಿಗಿಂತ ಹೆಚ್ಚು ಕ್ರೆಡಿಟ್ ಗೆ ನೋಂದಾಯಿಸಿಕೊಳ್ಳಬೇಕು ಎಂದು ಈ ಮೊದಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು. ಈ ಬಗ್ಗೆ ಪರಿಷ್ಕೃತ ಮಾರ್ಗಸೂಚಿಯಲ್ಲಿ ಐದನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗೆ ಹೆಚ್ಚುವರಿಯಾಗಿ 12 ಸೆಮಿಸ್ಟರ್ 12 ಕ್ರೆಡಿಟ್ ಪಡೆದುಕೊಳ್ಳಬೇಕು. ಒಟ್ಟಾರೆ ಐದನೇ ಸೆಮಿಸ್ಟರ್ ನಲ್ಲಿ 22 ಮತ್ತು 7ನೇ ಸೆಮಿಸ್ಟರ್ ನಲ್ಲಿ 12 ಕ್ರೆಡಿಟ್ ಪಡೆದುಕೊಳ್ಳಬೇಕು. ಆರನೇ ಸೆಮಿಸ್ಟರ್ ನಲ್ಲಿ ಸೆಮಿಸ್ಟರ್ 18 ಕ್ರೆಡಿಟ್ ಜೊತೆಗೆ ಹೆಚ್ಚುವರಿಯಾಗಿ 12 ಕ್ರೆಡಿಟ್ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ. ವಿದ್ಯಾರ್ಥಿ 7ನೇ ಸೆಮಿಸ್ಟರ್ ನಲ್ಲಿ ತನ್ನ ಇಂಟರ್ನ್ ಶಿಪ್ , ತಾಂತ್ರಿಕ ಸೆಮಿನಾರ್ ಮತ್ತು ತಮ್ಮ ಕೋರ್ಸ್ ವರ್ಕ್ ನ್ನು ಪೂರ್ಣಗೊಳಿಸಬೇಕು ಮತ್ತು 7ನೇ ಸೆಮಿಸ್ಟರ್ ಪೂರ್ಣಗೊಳ್ಳುವ ಮುಂಚಿತವಾಗಿ ಇಂಜಿನಿಯರಿಂಗ್ ನ ಒಟ್ಟು 160 ಕ್ರೆಡಿಟ್ ಪೂರ್ಣಗೊಳಿಸಬೇಕು ಎಂಬ ಷರತ್ತು ಹಾಕಲಾಗಿದೆ.
ಒಟ್ಟಾರೆ ಇದೀಗ ವಿಟಿಯು ಜಾರಿಗೊಳಿಸುತ್ತಿರುವ ಈ ವಿನೂತನ ಪ್ರಯೋಗ ಎಂಜಿನಿಯರಿಂಗ್ ಪದವಿ ಪೂರೈಸುವ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ.