ನೆರೆಯ ಮಹಾರಾಷ್ಟ್ರದಲ್ಲಿನ್ನು 11,12 ನೇ ತರಗತಿಯಲ್ಲಿ ಇಂಗ್ಲಿಷ್ ವಿಷಯ ಕಡ್ಡಾಯವಲ್ಲ. ಮಹಾರಾಷ್ಟ್ರ ಸರಕಾರದ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಮಂಡಳಿ ರೂಪಿಸಿರುವ ಕರಡು ಪಟ್ಟಿಯಲ್ಲಿ ಹೊಸ ಅಂಶ ಸೇರಿಸಲಾಗಿದೆ. ಅದರಲ್ಲಿ ಇಂಗ್ಲಿಷ್ ಅನ್ನು ವಿದೇಶಿ ಭಾಷೆ ಎಂದು ವರ್ಗಿಕರಿಸಲಾಗಿದೆ. ಈವರೆಗೆ ಮಹಾರಾಷ್ಟ್ರದಲ್ಲಿ 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷೆ ಕಡ್ಡಾಯವಾಗಿತ್ತು. ಹೊಸ ಕಡತದಲ್ಲಿ ಕನ್ನಡ ಸೇರಿದಂತೆ ದೇಶದ 17 ಭಾಷೆಗಳಲ್ಲಿ ಒಂದನ್ನು ಒಂದು ಭಾಷೆಯನ್ನು ವಿದ್ಯಾರ್ಥಿಗಳು ಇನ್ನು ಮುಂದೆ ಆಯ್ದುಕೊಳ್ಳಬಹುದಾಗಿದೆ.

ಮುಂಬೈ: ಮಹಾರಾಷ್ಟ್ರದಲ್ಲಿ ಇನ್ಮುಂದೆ 11 ಹಾಗೂ 12 ನೇ ತರಗತಿಗಳಿಗೆ ಇಂಗ್ಲಿಷ್ ಭಾಷಾ ವಿಷಯ ಕಡ್ಡಾಯ ಇರುವುದಿಲ್ಲ ಎನ್ನಲಾಗಿದೆ.

ಈ ಕುರಿತು ‘ಮಹಾರಾಷ್ಟ್ರ ರಾಜ್ಯ ಶಿಕ್ಷಣ, ಸಂಶೋಧನೆ ಹಾಗೂ ತರಬೇತಿ ಮಂಡಳಿ’ (SCERT) ಕರಡು ಸಿದ್ದಪಡಿಸಿದ್ದು ಆ ಪ್ರಕಾರ ಇಂಗ್ಲಿಷ್ ಅನ್ನು ಕಡ್ಡಾಯದಿಂದ ತೆಗೆದು ಹಾಕಿ ವಿದೇಶಿ ಭಾಷಾ ವಿಭಾಗದಲ್ಲಿ ಆಯ್ಕೆಯ ವಿಷಯವಾಗಿ ಇಡಲಾಗಿದೆ.

ಈ ಮೊದಲು ಮಹಾರಾಷ್ಟ್ರದಲ್ಲಿ 11 ಹಾಗೂ 12 ನೇ ತರಗತಿಗಳಿಗೆ ಇಂಗ್ಲಿಷ್ ಭಾಷಾ ವಿಷಯ ಕಡ್ಡಾಯವಿತ್ತು. ಅದರ ಜೊತೆ ಬೇರೆ ಯಾವುದಾದರೊಂದು ಪ್ರಾದೇಶಿಕ ಭಾಷೆ ಅಥವಾ ವಿದೇಶಿ ಭಾಷೆ ತೆಗೆದುಕೊಳ್ಳಬಹುದಿತ್ತು. ಈಗ ಈ ನಿಯಮಕ್ಕೆ ಬದಲಾವಣೆ ತರಲಾಗುತ್ತಿದೆ.

ಮರಾಠಿಯೂ ಸೇರಿದಂತೆ ಭಾರತದ 17 ಪ್ರಾದೇಶಿಕ ಭಾಷೆಗಳಲ್ಲಿ ಯಾವುದಾದರೂ ಒಂದನ್ನು ‘ಗ್ರೂಪ್ ಎ’ ದಿಂದ ತೆಗೆದುಕೊಳ್ಳಬಹುದು. ಅದರ ಜೊತೆಗೆ ಇಂಗ್ಲಿಷ್ ಸೇರಿದಂತೆ 8 ವಿದೇಶಿ ಭಾಷೆಗಳಲ್ಲಿ ಒಂದನ್ನು ‘ಗ್ರೂಪ್‌ ಬಿ’ದಿಂದ ತೆಗೆದುಕೊಳ್ಳಬಹುದು. ಅಥವಾ ‘ಗ್ರೂಪ್ ಎ’ ದಿಂದಲೇ ಎರಡೂ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೊಸ ಕರಡು ಹೇಳುತ್ತದೆ.