ಮೂಡಲಗಿ: ಸ್ವಂತಕ್ಕಾಗಿ ಮತ್ತು ಸಮಾಜಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಯೋಗದಿಂದ ರೋಗವನ್ನು ದೂರ ಮಾಡಿ ಸ್ವಸ್ತ, ಸದೃಢ, ಸಮಾಜ ಕಟ್ಟಲು ಸಾಧ್ಯವಿದೆ. ಹೀಗಾಗಿ ಪ್ರತಿಯೊಬ್ಬರು ಪ್ರತಿದಿನ ಯೋಗ ಮಾಡಿ ಸುಂದರ ಆರೋಗ್ಯಯುತ ಜೀವನ ರೂಪಿಸಿಕೊಳ್ಳಲು ಕಂಕಣಬದ್ಧರಾಗಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಭಾರತೀಯ ನೆಲದ ಋಷಿಮುನಿಗಳಿಂದ ಪ್ರಾರಂಭವಾದ ಯೋಗಾಭ್ಯಾಸವನ್ನು ಆಧುನಿಕ ಜಗತ್ತಿನ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋದ ಜನರು ಮರೆತೆ ಬಿಟ್ಟಿದ್ದರು. ಆದರೆ ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಪರಿಶ್ರಮ ಮತ್ತು ಕಾಳಜಿಯ ಪರಿಣಾಮವಾಗಿ ಇಡಿ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಹಿರಿಮೆ ಭಾರತಕ್ಕಿದೆ. ಇಂದು ಇಡಿ ಜಗತ್ತಿನ ಜನ ಭಾರತದ ಯೋಗವನ್ನು ಅನುಸರಿಸುತ್ತಿದ್ದಾರೆ.

ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಯೋಗದ ಮಹತ್ವವನ್ನು ಜಗತ್ತಿಗೆ ಸಾರುವ ಮೂಲಕ ನಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ಆರೋಗ್ಯಪೂರ್ಣ ಸಮಾಜ ಕಟ್ಟುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕಾಗಿ ವಿನಂತಿಸಿದರು.