ಬೆಟಗೇರಿ:
ಹತ್ತು ವರ್ಷಗಳ ಹಿಂದೆ ಜಗತ್ತಿನಲ್ಲಿ ದುರ್ಬಲ ಆರ್ಥಿಕತೆಯ ರಾಷ್ಟ್ರ ಎಂದೇ ಬಿಂಬಿತವಾಗಿದ್ದ ಭಾರತ, ಈಗ ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತದ ಪರಿಣಾಮ ಐದನೇ ಶಕ್ತಿಯುತ ರಾಷ್ಟ್ರವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.

ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು 2047ರಲ್ಲಿ ದೇಶವು ಸ್ವಾತಂತ್ರ‍್ಯಗೊಂಡು 100 ವರ್ಷಗಳು ಆಗುವ ಹಿನ್ನಲೆಯಲ್ಲಿ ಅಲ್ಲಿಯವರೆಗೆ ನಮ್ಮ ಜನರು ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಹೊಂದಬೇಕು. ನಮ್ಮ ಅರ್ಥವ್ಯವಸ್ಥೆ ವಿಶ್ವದ ಬಲಿಷ್ಠ ಅರ್ಥ ವ್ಯವಸ್ಥೆಯಾಗಿಸಬೇಕೆನ್ನುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ದೇಶದಲ್ಲಿ ಮೋದಿ ಗ್ಯಾರಂಟಿ ಬಗ್ಗೆ ಮಾತ್ರ ಜನರಿಗೆ ವಿಶ್ವಾಸವಿದೆ. ಉಳಿದ ಗ್ಯಾರಂಟಿಗಳ ಬಗ್ಗೆ ವಿಶ್ವಾಸ ಇಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯ ಸವಲತ್ತು ತಲುಪಬೇಕು ಎಂಬ ದೃಷ್ಟಿಕೋನದ ಹಿನ್ನಲೆಯಲ್ಲಿ ಪಕ್ಷದ ಧ್ಯೇಯವನ್ನು ಪ್ರಧಾನಿಯವರು ಈಡೇರಿಸಿದ್ದಾರೆ. ದೇಶದ 12 ಕೋಟಿ ರೈತರಿಗೆ ಕಿಸಾನ್ ಸಮ್ಮಾನ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ರೂಪಾಯಿಗಳನ್ನು ನೀಡಿದ್ದೇವೆ. 4 ಕೋಟಿ ಮನೆ ನಿರ್ಮಾಣ ಮಾಡಿದೆ. 10 ಕೋಟಿ ಮಹಿಳೆಯರಿಗೆ ಉಚಿತ ಉಜ್ವಲಾ ಗ್ಯಾಸ್ ಸಿಲಿಂಡರ್ ವಿತರಿಸಲಾಗಿದೆ, 12 ಕೋಟಿ ಬಡವರ ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡಲಾಗಿದೆ, 55 ಕೋಟಿ ಜನರಿಗೆ ಆಯುಷ್ಮಾನ ಭಾರತ ಯೋಜನೆಯಡಿ ರೂ.5ಲಕ್ಷದವರೆಗೆ ಉಚಿತ ಚಿಕಿತ್ಸೆ, ದೇಶದ 81 ಕೋಟಿ ಜನರಿಗೆ ಉಚಿತ ಪಡಿತರ ನೀಡಲಾಗಿದೆ ಎಂದರಲ್ಲದೇ ಮುಂದಿನ 5 ವರ್ಷಗಳವರೆಗೂ ಉಚಿತ ಪಡಿತರ ನೀಡಲಿದ್ದೇವೆ ಎಂದರು.

ಮುಂದಿನ ಐದು ವರ್ಷದಲ್ಲಿ ಭಾರತದ ಅರ್ಥವ್ಯವಸ್ಥೆ ಪ್ರಪಂಚದ ಮೂರು ಅಗ್ರ ಅರ್ಥವ್ಯವಸ್ಥೆಗಳಲ್ಲಿ ಒಂದಾಗಲಿದೆ ಭಾರತದಲ್ಲಿ ಜಿಡಿಪಿ ದರ 6.7 ನಿಂದ 7.6 ಗೆ ಏರಿಕೆಯಾಗಿದೆ ಎಂದು ವಿವರಿಸಿದರು.

ಹೀಗೆ ದೇಶದ ಪ್ರತಿಯೊಬ್ಬರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಲಾಭ ಪಡೆದುಕೊಳ್ಳಬೇಕು, ಮುಂದಿನ 25 ವರ್ಷಗಳಲ್ಲಿ ಭಾರತ ವಿಕಸಿತ ಭಾರತವಾಗಬೇಕು, ಆರ್ಥಿಕವಾಗಿ ಸಧೃಢಗೊಳ್ಳಬೇಕು, ಇದಕ್ಕೆ ನಾವೇಲ್ಲರೂ ಶ್ರಮ ಪಡಬೇಕಾಗಿದೆ ಎಂದು ತಿಳಿಸಿದರು ಮತ್ತು ಕೇಂದ್ರ ಸರ್ಕಾರದಿಂದ 18 ವೃತ್ತಿಪರರಿಗಾಗಿ ಪಿ.ಎಮ್. ವಿಶ್ವಕರ್ಮ ಯೋಜನೆ ಜಾರಿಗೆ ತಂದಿದೆ, ಈ ಯೋಜನೆಯಡಿ ಉಚಿತ ತರಬೇತಿ ನೀಡಿ, ಸಾಲ ಒದಗಿಸಿ, ನಿಮ್ಮ ವೃತ್ತಿಯನ್ನು ಅಭಿವೃದಿಗೊಳಿಸಲಿದ್ದಾರೆ ಎಂದರು.

ಗ್ರಾ.ಪಂ ಅಧ್ಯಕ್ಷೆ ತೇಜಶ್ವಿನಿ ನೀಲನ್ನವರ, ಮಾಜಿ ತಾ.ಪಂ ಸದಸ್ಯ ಲಕ್ಷ್ಮಣ ನೀಲನ್ನವರ, ಈರಯ್ಯ ಹಿರೇಮಠ, ಈಶ್ವರ ಮುಧೋಳ, ಶ್ರೀಕಾಂತ ಕರೆಪ್ಪಗೋಳ, ಮಾಯಪ್ಪ ಬಾನಸಿ, ವಿಠ್ಠಲ ಕೋಣಿ, ರಾಮಣ್ಣ ಮುಧೋಳ, ಗಂಗಯ್ಯ ಹಿರೇಮಠ, ಪಂಚಾಯತ ಅಭಿವೃದ್ಧಿ ಅಧಿಕಾರಿ ಎಚ್. ಎಂ ಭಾವಿಕಟ್ಟಿ, ಕೃಷಿ ವಿಜ್ಞಾನ ಕೇಂದ್ರ ಸಿಬ್ಬಂದಿ ಪರಶುರಾಮ ಪಾಟೀಲ, ವೈದ್ಯಾಧಿಕಾರಿ ರಶ್ಮಿ ಹುಂಡೇಕರ, ಗ್ಯಾಸ್ ವಿತರಕರಾದ ಚನ್ನಮ್ಮ, ಅಂಚೆ ಇಲಾಖೆಯ ಶೇಖರ ನೀಲನ್ನವರ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.