ಬೆಳಗಾವಿ : ಪುಣೆ-ಬೆಳಗಾವಿ-ಹುಬ್ಬಳ್ಳಿ ವಂದೇ ಭಾರತ್ ಎಕ್ಸಪ್ರೆಸ್ ರೈಲನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ಒಂದು ನಿಮಿಷದ ನಿಲುಗಡೆ ಕಲ್ಪಿಸುವಂತೆ ಒತ್ತಾಯಿಸಿ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಮನವಿ ಸಲ್ಲಿಸಿದರು.

ಪ್ರಸ್ತುತ ವಂದೇ ಭಾರತ್ ಎಕ್ಸಪ್ರೆಸ್ ರೈಲು ಬೆಳಗಾವಿಯನ್ನು ಹೊರತು ಪಡಿಸಿದರೆ ನೇರವಾಗಿ ಮಹಾರಾಷ್ಟ್ರದ ಮೀರಜ ಮತ್ತು ಸಾಂಗ್ಲಿ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯ ಅತ್ಯಂತ ಮಧ್ಯವರ್ತಿ ಸ್ಥಳವಾಗಿರುವ ಘಟಪ್ರಭಾ ಹಲವಾರು ತಾಲೂಕುಗಳ ಕೇಂದ್ರ ಸ್ಥಾನವಾಗಿದ್ದು ಹಾಗೂ ಅಮೃತ ಭಾರತ ಯೋಜನೆಯಡಿ ನವೀಕರಣಗೊಂಡ ರೈಲು ನಿಲ್ದಾಣಕ್ಕೆ ನಿಲುಗಡೆಗೆ ಅವಕಾಶ ನೀಡಿ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ಮತ್ತು ರೈಲ್ವೆ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾದ ಅವಕಾಶವಿದೆ ಎಂದರು.

ಘಟಪ್ರಭಾ ಪಟ್ಟಣವು ಸ್ವಾತಂತ್ರ ಹೋರಾಟಗಾರ  ಹರಡೇಕರ ಮಂಜಪ್ಪ ಅವರು ಬಡವರಿಗಾಗಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸುವ ಸಂಕಲ್ಪದಿಂದ ನಿರ್ಮಾಣಗೊಂಡ ಕರ್ನಾಟಕ ಆರೋಗ್ಯ ಧಾಮ ಆಸ್ಪತ್ರೆ ಮತ್ತು ಕರ್ನಾಟಕದ ಏಕೈಕ ಪ್ರತಿಷ್ಠಿತ ಸಹಕಾರಿ ಆಸ್ಪತ್ರೆಯಾದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಆಸ್ಪತ್ರೆ ಹಾಗೂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕೇಂದ್ರದಂತಹ ಹಲವಾರು ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು ಹಾಗೂ ವಾಣಿಜ್ಯ ಸಂಸ್ಥೆಗಳನ್ನು ಹೊಂದಿದ ಪಟ್ಟಣವಾಗಿದೆ.

ಮೀರಜ ಮತ್ತು ಸಾಂಗ್ಲಿ ನಿಲ್ದಾಣಗಳ ನಡುವಿನ ಅಂತರವು ಕೇವಲ ೭ ಕಿಮೀ ಇದ್ದು ಸಾಂಗ್ಲಿ ನಿಲ್ದಾಣಕ್ಕೆ ಈಗಾಗಲೇ ನಿಲುಗಡೆ ಹೊಂದಿದೆ. ಅದರಂತೆ ಈ ಭಾಗದ ರೈಲು ಪ್ರಯಾಣಿಕರ ಹಾಗೂ ಉದ್ಯಮಿಗಳ ಅನುಕೂಲಕ್ಕಾಗಿ ಪುಣೆ-ಬೆಳಗಾವಿ-ಹುಬ್ಬಳ್ಳಿ ವಂದೇ ಭಾರತ್ ಎಕ್ಸಪ್ರೆಸ್ ರೈಲನ್ನು ಘಟಪ್ರಭಾ ರೈಲು ನಿಲ್ದಾಣಕ್ಕೆ ಒಂದು ನಿಮಿಷದ ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಉಪಸ್ಥಿತರಿದ್ದು ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡುವುದು ಅತ್ಯಂತ ಸೂಕ್ತ ಬೇಡಿಕೆಯಾಗಿದ್ದು, ಸದರಿ ಬೇಡಿಕೆಯನ್ನು ಇಡೇರಿಸಲು ಅಗತ್ಯ ಕ್ರಮ ವಹಿಸಿ ಶೀಘ್ರ ನಿಲುಗಡೆಗೆ ಆದೇಶ ನೀಡಬೇಕೆಂದು ಸಚಿವರಿಗೆ ಸಲಹೆ ನೀಡಿದರು.