ಮೂಡಲಗಿ: ಬೆಳಗಾವಿ ಜಿಲ್ಲೆಯಲ್ಲಿ ಮಂಜೂರಾದ ನಾಲ್ಕು ಪಶು ಆಸ್ಪತ್ರೆ ಕಟ್ಟಡಗಳ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು, ಅಧಿಕಾರಿಗಳು, ಗುತ್ತಿಗೆದಾರನ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಪಶು ಆಯುಕ್ತರಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪತ್ರ ಬರೆದು ಒತ್ತಾಯಿಸಿದ್ದಾರೆ.

ಶುಕ್ರವಾರದಂದು ಪಟ್ಟಣದ ಪಶು ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಪಶು ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಕಳಪೆ ಮಟ್ಟದಲ್ಲಿ ಕೈಗೊಂಡಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈರಣ್ಣ ಕಡಾಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಮರ್ಪಕವಾದ ರೀತಿಯಲ್ಲಿ ಸಾಮಗ್ರಿಗಳನ್ನು ಬಳಸದೆ ಕಾಟಾಚಾರಕ್ಕಾಗಿ ಕಾಮಗಾರಿ ಮಾಡುತ್ತಿದ್ದರು ಸ್ಥಳೀಯ ಅಧಿಕಾರಿಗಳು ಏನು ಕೆಲಸ ಮಾಡುತ್ತಿರಿ ? ಸೈಟಿಗೆ ಬಂದು ವೀಕ್ಷಣೆ ಮಾಡಲು ಆಗೋದಿಲ್ಲ, ಕೇಂದ್ರ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಬಳಿಸಿಕೊಳ್ಳಿ ಎಂದು ತಾಲೂಕು ವೈದ್ಯಾಧಿಕಾರಿ ಮೋಹನ ಕಮತ ಅವರಿಗೆ ಕ್ಲಾಸ್ ತೆಗೆದುಕೊಂಡು ಶೀಘ್ರವಾಗಿ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಕಳಪೆ ಕಟ್ಟಡ ಕಾಮಗಾರಿ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಮೂಡಲಗಿ, ಖನಗಾಂವ, ಯರಗಟ್ಟಿ ಹಾಗೂ ಕಿತ್ತೂರನಲ್ಲಿ ಆರ್.ಐ.ಡಿ.ಎಫ್ ಟ್ರಾಂಚ್ -28ನೇ ಯೋಜನೆಯಡಿ ಪಶು ಚಿಕಿತ್ಸಾಲಯ ಮತ್ತು ಪಶು ಆಸ್ಪತ್ರೆಗಳ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 199.13 ಲಕ್ಷ ರೂಪಾಯಿಗಳ ಅನುದಾನದಲ್ಲಿ ರಾಜ್ಯ ಸರ್ಕಾರಿ ಸ್ವಾಮ್ಯದ ನಿರ್ಮಾಣ ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಹ್ಯಾಬಿಟೇಟ್ ಸೆಂಟರ್ ಬೆಂಗಳೂರು ಈ ಸಂಸ್ಥೆಗೆ ಮಂಜೂರಾತಿ ನೀಡಲಾಗಿದ್ದು. ಪಶು ಚಿಕಿತ್ಸಾಲಯ ಮತ್ತು ಪಶು ಆಸ್ಪತ್ರೆಗಳ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ ಎಂದರು.

ಆದರೇ ಸದರಿ ಕಾಮಗಾರಿಯನ್ನು ನಿಗದಿತ ಕಾಲಾವಧಿ ಹಾಗೂ ಪೂರ್ಣ ಗುಣ ಮಟ್ಟದಲ್ಲಿ ನಿರ್ಮಾಣ ಮಾಡುವ ಜವಾಬ್ದಾರಿಯು ಸಂಬಂಧಿಸಿದ ಗುತ್ತಿಗೆದಾರದ್ದಾಗಿದೆ ಎಂದರು.