ಬೆಳಗಾವಿ : ಕರ್ನಾಟಕ ರಾಜ್ಯದಲ್ಲಿ ಶೋಷಿತ ಜನಾಂಗದ ಅಭಿವೃದ್ದಿಗಾಗಿ ನಿರ್ಮಾಣಗೊಂಡ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂಪಾಯಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆ ನಡೆಸಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮನವಿ ಮಾಡಿದರು.
ರಾಜ್ಯಸಭೆಯಲ್ಲಿ ಶುಕ್ರ ವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ವಾಲ್ಮೀಕಿ ನಿಗಮದಲ್ಲಿ ಕಳೆದ ಒಂದು ವರ್ಷದಿಂದ ಫಲಾನುಭವಿಗಳ ಆಯ್ಕೆಯೇ ನಡೆದಿಲ್ಲ, ದಲಿತ ವಿದ್ಯಾರ್ಥಿಗಳ ನಿಗಮಕ್ಕೆ ಸೇರಿದ ಹಾಸ್ಟೇಲುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡಿಲ್ಲ. ಪರಿಶಿಷ್ಠ ಪಂಗಡದ ರೈತರ ಜಮೀನುಗಳಿಗೆ ಕೊಳವೆ ಭಾವಿಗಳನ್ನು ಕೊರೆದಿಲ್ಲ. ಸಣ್ಣ ಪುಟ್ಟ ವ್ಯಾಪಾರಕ್ಕಾಗಿ ಹಣಕಾಸು ನೆರವು ನೀಡಿಲ್ಲ. ಪರಿಶಿಷ್ಟ ಪಂಗಡದ ಜನರ ಜೀವನ ಮಟ್ಟ ಹಾಗೂ ಆರ್ಥಿಕ ಸ್ಥಿತಿಗಳನ್ನು ಸುಧಾರಿಸುವ ಕಾರ್ಯಕ್ರಮಗಳಿಗಾಗಿ ಬಳಸಿಕೊಳ್ಳಬೇಕಾದ ಈ ಹಣವನ್ನು ವ್ಯವಸ್ಥಿತವಾಗಿ ಲೂಟಿ ಹೊಡೆಯಲಾಗಿದೆ.
ವಾಲ್ಮೀಕಿ ನಿಗಮದ ಅಧಿಕಾರಿ ಒಬ್ಬರು ಡೆತ್ ನೋಟ ಬರೆದು ಆತ್ಮಹತ್ಯೆ ಮಾಡಿಕೊಂಡ ಮೇಲೆ ಈ ಪ್ರಕರಣ ಬೆಳಕಿಗೆ ಬಂದಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವರು ಈಗಾಗಲೇ ರಾಜಿನಾಮೆ ಸಲ್ಲಿಸಿದ್ದಾರೆ. ಅವರನ್ನು ಇ.ಡಿ ಬಂಧನಕ್ಕೊಳಪಡಿಸಿದೆ. ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ರಾಜ್ಯದ 20 ಕಡೆ ದಾಳಿ ನಡೆಸಿದ್ದು, ಎಸ್.ಐ.ಟಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಸುಮಾರು 15 ಜನರನ್ನು ಬಂಧಿಸಿದೆ. ಆಂದ್ರಪ್ರದೇಶ, ತೆಲಗಾಂಣ, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳ ಸುಮಾರು 270 ಬೇನಾಮಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಹಗರಣಕ್ಕೆ ಸಂಬಂಧಿಸಿದ ಸುಮಾರು 40 ಕೋಟಿ ರೂಪಾಯಿಗಳನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಅಲ್ಪಸಂಖ್ಯಾತರ, ಹಿಂದುಳಿದವರ ಹಾಗೂ ದಲಿತರ ನಿಜವಾದ ರಕ್ಷಕರು ನಾವೇ ಎಂದು ಹೇಳುತ್ತಾ, ಭಾರತದ ಸಂವಿಧಾನ ಅಪಾಯದಲ್ಲಿದೇ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲಾಗುವುದು ಎಂಬ ಸುಳ್ಳು ವದಂತಿಗಳನ್ನು ಹರಡಿ ಅಧಿಕಾರಕ್ಕೆ ಬಂದವರು ಅದೇ ದಲಿತರ, ಪರಿಶಿಷ್ಟ ಪಂಗಡದವರ ಉದ್ದಾರಕ್ಕಾಗಿ ಮೀಸಲಿಟ್ಟ ಹಣವನ್ನು ತನ್ನ ಪಕ್ಷದ ಲೋಕಸಭಾ ಅಭ್ಯರ್ಥಿಗಳ ಗೆಲುವಿಗಾಗಿ ಬಳಸಿಕೊಂಡಿದೆ ಎಂಬ ಸುದ್ದಿ ಅಹಿಂದ ವರ್ಗಕ್ಕೆ ಬಗೆದ ವಿಶ್ವಾಸ ದ್ರೋಹವಾಗಿದೆ.
ನ್ಯಾಯ ಸಮ್ಮತ ತನಿಖೆ ನಡೆಸುತ್ತಿರುವ ಇ.ಡಿ ಅಧಿಕಾರಿಗಳ ಮೇಲೆಯೇ ಬೆದರಿಕೆ ಪ್ರಕರಣ ದಾಖಲಿಸಿ ರಾಜಕೀಯ ಕೆಸರೆರಚಾಟದ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರಗಳು ನಡೆಯುತ್ತಿವೆ. ದಲಿತರ ದುಡ್ಡಿಗೆ ಕೈ ಹಾಕಿ ಹಗಲು ದರೋಡೆ ಮಾಡಿರುವ ಈ ಪ್ರಕರಣವನ್ನು ಸಿಬಿಐ ಮೂಲಕ ತನಿಖೆಗೊಪಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಆ ಮೂಲಕ ಪರಿಶಿಷ್ಟ ಪಂಗಡದ ಜನರಿಗೆ ನ್ಯಾಯ ಒದಗಿಸಬೇಕಾಗಿ ಮನವಿ ಮಾಡಿದರು