ಗೋಕಾಕ:
ಚುನಾವಣೆ ಸಂದರ್ಭಗಳಲ್ಲಿ ಜನರ ಹಿತಾಸಕ್ತಿಯನ್ನು ಕಾಯುವ ನಾಟಕವಾಡುವರಿಗಿಂತ ಚುನಾವಣೆ ನಂತರ ಜನರ ಹಿತಾಸಕ್ತಿಗೆ ಕೆಲಸ ಮಾಡುವವರನ್ನು ಗುರುತಿಸಿ ಬೆಂಬಲಿಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನಾನು ದೇಶದ ಪ್ರಧಾನ ಸೇವಕ ಎಂದು ಹೇಳಿರುವುದು ಎಲ್ಲ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದು, ಜನಸಾಮಾನ್ಯರು ಈ ವಿಷಯವನ್ನು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಬುಧವಾರ ಜ-10 ರಂದು ನಗರದ ತಾಲೂಕ ಪಂಚಾಯತ್ ಆವರಣದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಡ್ರೋನ್‌ಗಳನ್ನು ಕೃಷಿ ವಿಶ್ವವಿಧ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಿಗೆ ಉಚಿತವಾಗಿ ನೀಡಲಾಗುತ್ತಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ, ರೈತರ ಉತ್ಪಾದಕ ಸಂಸ್ಥೆಗಳಿಗೆ ಶೇ.75ರಷ್ಟು ಸಬ್ಸಿಡಿ ದರದಲ್ಲಿ ಹಾಗೂ ಕೃಷಿ ಪದವೀದರರಿಗೆ ಶೇ.50ರಷ್ಟು ಸಬ್ಸಿಡಿಯಲ್ಲಿ ಡ್ರೋನ್ ಗಳನ್ನು ನೀಡಲಾಗುತ್ತಿದೆ. ರೂ 1261 ಕೋಟಿ ರೂ ವೆಚ್ಚದಲ್ಲಿ ಮೂರು ವರ್ಷಗಳಲ್ಲಿ 15 ಸಾವಿರ ಡ್ರೋನ್‌ಗಳನ್ನು ಮಹಿಳೆಯರಿಗೆ ನೀಡುವ ಗುರಿ ಹೊಂದಿದೆ. ಆಧುನಿಕ ಕೃಷಿ ಸಲಕರಣೆಗಳು ಹಾಗೂ ಕೃಷಿ ಯಂತ್ರೋಪಕರಣಗಳನ್ನು ಉಪಯೋಗ ಮಾಡುವ ಮೂಲಕ ನಮ್ಮ ಕೃಷಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.

ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆ, ಕಿಸಾನ್ ಸಮ್ಮಾನ್ ನಿಂದ ಕೃಷಿಕರಿಗೆ ನೆರವು, ಪಿಎಂ ಆವಾಸ್ ಯೋಜನೆಯಿಂದ ಲಕ್ಷಾಂತರ ಮಂದಿಗೆ ವಸತಿ ಸೌಲಭ್ಯ ನೀಡಲಾಗಿದೆ. ಗ್ರಾಮೀಣರಿಗೆ ಜಲಜೀವನ್ ಮಿಷನ್ ನಿಂದ ಶುದ್ಧ ಕುಡಿಯುವ ನೀರು ನೀಡಲಾಗುತ್ತಿದೆ. ಜನರ ಆರೋಗ್ಯಕ್ಕಾಗಿ ಆಯುಷ್ಮಾನ್ ಯೋಜನೆ ನೆರವಾಗಿದೆ. ಡಿಜಿಟಲೀಕರಣ, ಯುಪಿಐ ಪಾವತಿ, ನೇರ ನಗದು ವರ್ಗಾವಣೆಯಿಂದ ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲದಂತಾಗಿದೆ. ಜನಧನ ಯೋಜನೆ, ವಿಶ್ವಕರ್ಮ ಯೋಜನೆಗಳು ದೇಶದ ಜನರ ಸ್ವಾವಲಂಬನೆ ಬದುಕಿಗೆ ಆಸರೆಯಾಗಿದ್ದು, ಈ ಯೋಜನೆಗಳ ಯಶಸ್ವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮೂಲ ಉದ್ದೇಶ, ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳನ್ನ ಜನರಿಗೆ ತಿಳಿಸುವುದಾಗಿದೆ. ಸರ್ಕಾರ ಬಡವರ ಕಲ್ಯಾಣಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮ ಪ್ರಚಾರ ಮಾಡಲಾಗಿದೆ. ಯೋಜನೆಗಳ ಬಗ್ಗೆ ಜನರಿಗೆ ತಿಳಿಸಲಾಗುತ್ತಿದೆ. ದೇಶದಲ್ಲಿ ಮೋದಿ ಗ್ಯಾರಂಟಿ ವಾಹನ ಓಡುತ್ತಿದೆ. ಜನವರಿ 25 ರವರೆಗೆ ಪ್ರತಿ ಗ್ರಾಮ, ಪಟ್ಟಣದಲ್ಲಿ ಸಂಚರಿಸಿ ಯೋಜನೆಗಳ ಪ್ರಚಾರ ಕೈಗೊಳ್ಳಲಿದೆ ಎಂದರು.

ತಹಶೀಲ್ದಾರ ಮೋಹನ ಭಸ್ಮೆ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಯು.ಪಿ. ಕಾಂಬಳೆ, ನಗರಸಭೆ ಆಯುಕ್ತ ಸಿದ್ದಪ್ಪ ಮಹಾಜನ, ಸಹಾಯಕ ಕೃಷಿ ನಿರ್ದೇಶಕ ಎಂ. ಎಂ ನದಾಫ್, ಕ್ಷೇತ್ರ ಶಿಕ್ಷಣಾಧಿಕಾರಿ, ಬಳಿಗಾರ, ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅಂಟಿನ್, ಕೆನರಾ ಬ್ಯಾಂಕ್ ಮ್ಯಾನೇಜರ್‌ ಮಲ್ಲನಗೌಡ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಆದರ್ಶ, ಗ್ಯಾಸ್ ವಿತರಕ ಎಂ. ಡಿ. ಚುನಮರಿ, ಪ್ರಮುಖ ಬಸವರಾಜ ಹುಳ್ಳೇರ, ಸೋಮಶೇಖರ ಮಗದುಮ್ಮ, ಡಾ. ಶ್ರೀಶೈಲ ಹೊಸಮನಿ, ಪ್ರಮೋದ ಗುಲ್ಲ, ಶಕೀಲ ಧಾರವಾಡಕರ, ಬಸವರಾಜ ಹಿರೇಮಠ, ಸಂತೋಷ ಬೆನ್ನಾಡಿ, ಶಿವು ಕಣಗನ್ನಿ ಸೇರಿದಂತೆ ನಗರಸಭೆ ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.