ಮೂಡಲಗಿ: ರೈತರ ಪರಿಶ್ರಮಕ್ಕೆ ತಕ್ಕಂತೆ ಅವರಿಗೆ ಪ್ರತಿಫಲ ಒದಗಿಸಲು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ಹಿಂಗಾರು ಹಂಗಾಮಿನ ಆರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು ಪ್ರತಿ ಕ್ವಿಂಟಾಲ್ ಗೆ ರೂ.130 ರಿಂದ 300ರ ವರೆಗೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಣಯವನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ.

ಗುರುವಾರ ಅ-17 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರವು ರೈತರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ದರವನ್ನು ಖಾತ್ರಿಪಡಿಸುವುದಕ್ಕಾಗಿ 2025-26 ಸಾಲಿನ ಹಿಂಗಾರು ಬೆಳೆಗಳ ಕನಿಷ್ಟ ಬೆಂಬಲ ಬೆಲೆವನ್ನು ಹೆಚ್ಚಿಸಿದೆ. ಕನಿಷ್ಟ ಬೆಂಬಲ ಬೆಲೆಯಲ್ಲಿ ಗರಿಷ್ಟ ಹೆಚ್ಚಳವಾಗಿ ರಾಪ್ಸೀಡ್ ಮತ್ತು ಸಾಸಿವೆ ಪ್ರತಿ ಕ್ವಿಂಟಾಲಿಗೆ 300 ರೂ. ಹಾಗೂ ಮಸೂರ ಬೇಳೆಗೆ ಪ್ರತಿ ಕ್ವಿಂಟಾಲಿಗೆ 275 ರೂ. ಹೆಚ್ಚಿಸಲಾಗಿದೆ.ಗೋದಿ‌ -ರೂ,150, ಬಾರ್ಲಿ – ರೂ,130, ಕಡಲೆ – ರೂ,210, ಸೂರ್ಯಕಾಂತಿ – ರೂ,140 ಪ್ರತಿ ಕ್ವಿಂಟಾಲಿಗೆ ಹೆಚ್ಚಿಸಿ ದೀಪಾವಳಿಗೂ ಮುನ್ನ ರೈತರಿಗೆ ಬಂಪರ್ ಕೊಡುಗೆ ನೀಡಿದೆ ಎಂದರು.

ಮುಂಗಾರು ಹಂಗಾಮಿನ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ. ಹಿಂಗಾರು ಹಂಗಾಮಿಗೆ 6 ಬೆಳೆಗಳಿಗೆ ಹೊಸ ಕನಿಷ್ಠ ಬೆಂಬಲ ಬೆಲೆ ಘೋಷಿಸಲಾಗಿದೆ. ಯೂರಿಯಾ ಹೊರತಾದ ರಸಗೊಬ್ಬರಗಳ‌ ಸಬ್ಸಿಡಿಗೆ 24,475 ಕೋಟಿ ರೂ. ವಿನಿಯೋಗಿಸುವ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲಾಗಿದೆ. ಅನ್ನದಾತರ ಆದಾಯ ಹೆಚ್ಚಿಸಲು ಸದಾ ಬದ್ಧತೆ ತೋರಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಡಿನ ಅನ್ನದಾತರ ಪರವಾಗಿ ಧನ್ಯವಾದಗಳನ್ನು ತಿಳಿಸುವುದಾಗಿ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.