ಬೆಂಗಳೂರು: ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರೂ ಹಾಜರಾತಿ ಕೊರತೆಯಿಂದ 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1 ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಜೂನ್‌ನಲ್ಲಿ ನಡೆಯುವ ಪರೀಕ್ಷೆ-2ರಲ್ಲಿ ಖಾಸಗಿ ವಿದ್ಯಾರ್ಥಿಗಳಾಗಿ ಪರೀಕ್ಷೆ ಬರೆಯಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅವಕಾಶ ನೀಡಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಲು ಶೇ.75ರ ಹಾಜರಾತಿ ಕಡ್ಡಾಯವಿದೆ. ಅಷ್ಟು ಹಾಜರಾತಿ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೂರಲು ಅವಕಾಶವಿರುವುದಿಲ್ಲ, 26,692 ವಿದ್ಯಾರ್ಥಿಗಳ ನೋಂದಣಿ ಶಾಲಾ ಮುಖ್ಯ ಶಿಕ್ಷಕರ ಹಂತದಲ್ಲಿಯೇ ರದ್ದಾಗಿತ್ತು. ಈ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಅವಕಾಶ ಕಲ್ಪಿಸಲಾಗಿದೆ ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.