ಧಾರವಾಡ: ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಇವೆಲ್ಲವೂ ಒಂದೇ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಇರಬೇಕು. ಇವೆಲ್ಲವನ್ನು ಒಟ್ಟುಗೂಡಿಸಿ ಒಂದು ಸಮಗ್ರ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಇವೆಲ್ಲವೂ ಒಂದೇ ಕಡೆ ಇದ್ದರೆ ಅನುಕೂಲವಾಗುತ್ತದೆ. ಅಂತರ್ ಶಾಸ್ತ್ರೀಯ ಅಧ್ಯಯನ ಪ್ರಯೋಗ ಎಲ್ಲದಕ್ಕೂ ಸಹಕಾರಿಯಾಗುತ್ತದೆ. ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಮೂರು ಅಥವಾ ಆರು ತಿಂಗಳಿಗೊಮ್ಮೆ ಕಮ್ಮಟ ಏರ್ಪಡಿಸಬೇಕು. ಹಲವಾರು ರೈತರು ಕೃಷಿಯಿಂದ ವಿಮಕರಾಗುತ್ತಿದ್ದಾರೆ. ಜಮೀನು ಮಾರಾಟ ಮಾಡಿದ್ದಾರೆ. ರೈತರು ಬೆಳೆದ ಎಲ್ಲಾ ಬೆಳೆಗೆ ಬೆಂಬಲ ಸಿಗುವಂತೆ ಮಾಡಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರು ಜಮೀನಿನಲ್ಲಿ ಕೆಲಸ ಮಾಡಿ ರೈತರಿಂದ ಪಗಾರ ಪಡೆಯುವಂತೆ ಮಾಡಬೇಕು ಎಂದು ಹೇಳಿದರು.