ಮಂಗಳೂರು :

ಕಾಂತಾರ ಸಿನಿಮಾ ಬಳಿಕ ದೈವಾರಾಧನೆ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ. ದೈವದ ಮೇಲೆ ಭಕ್ತಿ ಹುಟ್ಟಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಹಣ ಮಾಡಲು ನಾನಾ ರೀತಿಯ ಕಸರತ್ತು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ದೈವಗಳ ಹೆಸರಲ್ಲಿ ದಂಧೆಗೆ ಇಳಿದವರ ವಿರುದ್ಧ ದೈವಾರಾಧಕರು ಕೊರಗಜ್ಜನ ಮೊರೆ ಹೋಗಿದ್ದ ಘಟನೆ ನಡೆದಿತ್ತು. ಸದ್ಯ ಈಗ ದೈವಾರಾಧನೆ ಪ್ರದರ್ಶನ ಧಾರಾವಾಹಿಗೂ ವ್ಯಾಪಿಸಿದ್ದು ಕರಾವಳಿಯಲ್ಲಿ ದೈವಾರಾಧಕರ ಆಕ್ರೋಶ ಭುಗಿಲೆದ್ದಿದೆ. ದಿನೇ ದಿನೇ ತುಳುನಾಡು ವಿಶಿಷ್ಟ, ಧಾರ್ಮಿಕ ಆಚರಣೆಗೆ ಧಕ್ಕೆಯಾಗುತ್ತಿದೆ ಎಂದು ದೈವಾರಾಧಕರು ಅಸಮಾಧಾನ ಹೊರ ಹಾಕಿದ್ದಾರೆ.

ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರವಾಹಿಯ ಪ್ರೋಮೋದಲ್ಲಿ ದೈವದಂತೆ ವೇಷ ಭೂಷಣ ಧರಿಸಿ ನಟನೆ ಮಾಡಲಾಗಿದೆ. ಧಾರಾವಾಹಿಯಲ್ಲಿ ದೈವಕೋಲ ಪ್ರದರ್ಶನಗೊಂಡ ಹಿನ್ನೆಲೆ ತುಳುನಾಡ ದೈವಾರಾಧಕರು ಬೇಸರ ವ್ಯಕ್ತಪಡಿಸಿದ್ದಾರೆ. ದೈವಾರಾಧನೆ ಪ್ರದರ್ಶನ ಬೆನ್ನಲ್ಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೈವದ ಪಾತ್ರ ನಿರ್ವಹಿಸಿದ ಕಲಾವಿದನ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಕಲಾವಿದ ಮಂಗಳೂರಿನ ಪ್ರಶಾಂತ್‌ ಸಿ.ಕೆ ಹಾಗೂ ಧಾರವಾಹಿ ನಿರ್ದೇಶಕನ ವಿರುದ್ಧ ಪ್ರಕರಣ ದಾಖಲಿಸಲು ದೈವಾರಾಧಕರು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಧಾರಾವಾಹಿ ತೆರೆ ಮೇಲೆ ಬರಬಾರದೆಂದು ಪಟ್ಟು ಹಿಡಿದಿದ್ದಾರೆ.

ಧಾರಾವಾಹಿಯ ಪ್ರೋಮೋ ವಿಡಿಯೋ ವೈರಲ್ ಬೆನ್ನಲ್ಲೇ ದೈವಾರಾಧಕರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಮಂಗಳೂರಿನ ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಮಂಗಳೂರು ನಗರ ಪೊಲೀಸ್‌ ಕಮಿಷನ‌ರ್ ಹಾಗು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದೆ. ಚಿತ್ರೀಕರಣಕ್ಕೆ ಸುಳ್ಳು ಹೇಳಿ ಬ್ಯಾಂಡ್ ವಾದ್ಯದವರನ್ನು ಕರೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದೈವಸ್ಥಾನದಲ್ಲಿ ಕೋಲ ಇದೆ ಎಂದು ಹೇಳಿ ದೇವಸ್ಥಾನದ ಬ್ಯಾಂಡ್ ವಾದ್ಯದವರನ್ನು ಕರೆಸಿದ್ದಾರೆ ಎಂದು ದೈವಾರಾಧಕರ ವೇದಿಕೆ ಧಾರಾವಾಹಿ ತಂಡದ ಮೇಲೆ ಆರೋಪ ಮಾಡಿದ್ದಾರೆ.

ದೈವಾರಾಧನೆ ನಮ್ಮ ಸಮಾಜದ ಕರ್ತವ್ಯ. ಸೀಮಿತ ಸಮಾಜದವರು ಮಾತ್ರ ದೈವ ನರ್ತನ ಮಾಡಬೇಕು. ಈಗ ಛದ್ಮ ವೇಷದಂತೆ
ನರ್ತನ ಮಾಡಬೇಕು. ಈಗ ಛದ್ಮವೇಷದಂತೆ ಪ್ರತಿಯೊಬ್ಬರು ವೇಷ ಹಾಕಿಕೊಂಡು ಹಣ ಮಾಡುತ್ತಿದ್ದಾರೆ. ಈ ರೀತಿಯ ಘಟನೆಗಳಿಂದ ದೈವಾರಾಧನೆಗೆ ಅಪಮಾನ ಮಾಡಲಾಗುತ್ತಿದೆ. ಸಾಂಪ್ರದಾಯಿಕವಾಗಿ ದೈವ ನರ್ತನ ಸೇವೆ ನಡೆಯುವಲ್ಲಿಯೇ ಅದು ನಡೆಯಬೇಕು. ಸಿನಿಮಾ, ಧಾರಾವಾಹಿ, ವೇದಿಕೆಗಳಲ್ಲಿ ದೈವಾರಾಧನೆ ಪ್ರದರ್ಶನ ಸಲ್ಲದು. ನಾವು ಆ ರೀತಿಯ ಪ್ರದರ್ಶನಗಳಿಗೆ ಅವಕಾಶ ನೀಡೋದಿಲ್ಲ. ಇದರ ವಿರುದ್ಧ ನಾವು ಹೋರಾಟ ನಡೆಸುತ್ತೇವೆ. ಸಿನಿಮಾ, ಧಾರಾವಾಹಿ ಯಾವುದರಲ್ಲೂ ದೈವಾರಾಧನೆಯನ್ನು ಬಳಸಿಕೊಳ್ಳಬಾರದು. ಇದು ನಮ್ಮ ಜನಾಂಗೀಯ ನಿಂದನೆ. ಮುಂದೆ ಇದರ ವಿರುದ್ಧ ಕಾನೂನಾತ್ಮಕ ಹೋರಾಟವನ್ನು ನಡೆಸುತ್ತೇವೆ ಎಂದು ದೈವಾರಾಧಕರು ಎಚ್ಚರಿಕೆ
ನೀಡಿದ್ದಾರೆ.

ಕಾಂತಾರ-2 ಸಿನಿಮಾದಲ್ಲಿ ದೈವರಾಧಾನೆ ಬೇಡ :

ಕಾಂತಾರ ಸಿನಿಮಾ ಬಂದ ಬಳಿಕ ಹೊರಜಿಲ್ಲೆಯಲ್ಲಿ ದೈವಾರಾಧನೆ ನಡೆಯುತ್ತಿದೆ. ಇದನ್ನು ಸಹ ನಮ್ಮ ವೇದಿಕೆ ಮೂಲಕ ನಿಲ್ಲಿಸುವ ಕೆಲಸ ಮಾಡುತ್ತೇವೆ. ಕಾಂತಾರ 2 ಗೂ ಎಚ್ಚರಿಕೆ ನೀಡಿದ್ದೇವೆ. ಕಾಂತಾರ ಸಿನಿಮಾ ಬರೋದಕ್ಕೆ ನಮ್ಮ ವಿರೋಧವಿಲ್ಲ. ಆದ್ರೆ ಅದರಲ್ಲಿ ದೈವದ ಆಚಾರ ವಿಚಾರ ಇರಬಾರದು. ದೈವದ ಕೊಡಿ ಅಡಿಯಲ್ಲಿ ನಡೆಯುವ ಆಚಾರ ವಿಚಾರ ಅದರಲ್ಲಿ ಇರಬಾರದು. ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟ ಮಾಡ್ತವೆ ಎಂದು ಮಂಗಳೂರಿನಲ್ಲಿ ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಕಾರ್ಯದರ್ಶಿ ರವಿ ಬಜ್ಪೆ ಹೇಳಿದರು.