ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಅವರ ಯಾವುದೇ ತಪ್ಪು ಇಲ್ಲ ಎಂದು ಅವರ ಪತಿ ಉತ್ತರ ಪ್ರದೇಶ ಮೂಲದ ಸಂಜಯ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
2002 ರಲ್ಲಿ ಅವರು ಬೆಂಗಳೂರಿಗೆ ಬಂದಿದ್ದರು. ಆಗ ಪವಿತ್ರಾ ಗೌಡ ಅವರ ಪರಿಚಯವಾಗಿ ಪ್ರೀತಿ ಏರ್ಪಟ್ಟು ನಂತರ ಮದುವೆಯಾಗಿದ್ದರು. ಈ ದಂಪತಿಗೆ ಹೆಣ್ಣು ಮಗುವಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಸಂಜಯ ಸಿಂಗ್ ಅವರು, ಪ್ರಕರಣದಲ್ಲಿ ಪವಿತ್ರಾ ಅವರ ತಪ್ಪಿಲ್ಲ ಎಂದು ಅವರ ಪರವಾಗಿ ಮಾತನಾಡಿದ್ದಾರೆ. ನನಗೆ ನೋವಾದರೆ ನಾನು ಹೋಗಿ ನನ್ನ ಹೆಂಡತಿ ಬಳಿ ಹೇಳಿಕೊಳ್ಳುತ್ತೇನೆ. ಅದರಂತೆ ಪವಿತ್ರಾ ಅವರ ಮನಸ್ಸಿಗೆ ನೋವಾಗಿದೆ, ಇದನ್ನು ಅವರ ಗಂಡ ದರ್ಶನ್ ಬಳಿ ಹೇಳಿದ್ದಾರೆ. ಇದರಲ್ಲಿ ದರ್ಶನ್ ಅಷ್ಟು ಆತುರದ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಸರಿ ದಾರಿಯಲ್ಲಿ ಹೋಗಿದ್ದರೆ ಇಷ್ಟು ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಎ1 ಪವಿತ್ರಾ ಎಂದು ಹೇಳುತ್ತಿದ್ದೀರಿ. ತಪ್ಪು ಮಾಡಿರುವುದು ರೇಣುಕಾ ಸ್ವಾಮಿ. ಅವರಿಗೆ ಮದುವೆಯಾಗಿದೆ. ಅವರ ಪತ್ನಿ ಜೊತೆ ಈ ರೀತಿ ಅಶ್ಲೀಲ ಸಂದೇಶ ಮಾಡಿ ವರ್ತಿಸಿದ್ದರೆ ಅವರು ಸುಮ್ಮನೆ ಇರುತ್ತಿದ್ದಾರಾ? ನನ್ನ ಪ್ರಕಾರ ಇಲ್ಲಿ ಪವಿತ್ರಾ ಮಾಡಿದ್ದು ಸರಿ. ಅವರ ತಪ್ಪಿಲ್ಲ, ಅವರಿಗೆ ನೋವಾಗಿದೆ. ಅದಕ್ಕೆ ಅವರು ತನ್ನ ಗಂಡನ ಬಳಿ ಹೋಗಿ ಹೇಳಿದ್ದಾರೆ ಅಷ್ಟೇ ಎಂದು ತಿಳಿಸಿದ್ದಾರೆ.