ಬೆಂಗಳೂರು: ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭೆಗೆ ಮೇ 7 ರಂದು ಉಪಚುನಾವಣೆ ನಿಗದಿಯಾಗಿದ್ದು, ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಇತ್ತ ನಿರೀಕ್ಷೆಯಂತೆ ದಿವಂಗತ ರಾಜಾ ವೆಂಕಟಪ್ಪನಾಯಕ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ.

ರಾಜಾ ವೆಂಕಟಪ್ಪ ನಾಯಕ ನಿಧನದಿಂದ ಕ್ಷೇತ್ರ ತೆರವಾಗಿದ್ದು, ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭೆಯ ಉಪಚುನಾವಣೆ ನಡೆಯಲಿದೆ. ಹೀಗಾಗಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ.

2023ರಲ್ಲಿ ವಿಧಾನಸಭೆಗೆ ಚುನಾವಣೆ ನಡೆದಿತ್ತು. ರಾಜಾ ವೆಂಕಟಪ್ಪ ನಾಯಕ 25 ಸಾವಿರ ಮತಕ್ಕೂ ಹೆಚ್ಚು ಅಂತರದಿಂದ ಗೆದ್ದಿದ್ದರು. 2024ರಲ್ಲಿ ಲೋಕಸಭೆಗೆ ಅವರೇ ಕಾಂಗ್ರೆಸ್‌ ಹುರಿಯಾಳು ಎಂದು ಬಿಂಬಿಸಲಾಗಿತ್ತು. ಆದರೆ, ವಿಧಿಯಾಟ ಅವರು ನಿಧನರಾಗಿದ್ದು, ಉಪಚುನಾವಣೆ ಕ್ಷೇತ್ರದ ಜನತೆ ಎದುರಿಸುವಂತಾಗಿದೆ.
ಆಯ್ಕೆಯಾದ ಒಂದು ವರ್ಷದೊಳಗೆ ಚುನಾವಣೆ ನಡೆಯುವುದರಿಂದ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಚಟುವಟಿಕೆಗಳು ಚುರುಕುಗೊಂಡಿದ್ದು, ರಾಜಕೀಯ ಪಲ್ಲಟಗಳು ನಡೆಯುತ್ತಿವೆ.