ಬೆಂಗಳೂರು: ಮುಂದಿನ ತಿಂಗಳು (ಆಗಸ್ಟ್‌ 2ರಿಂದ 9) ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-3ಕ್ಕೆ (SSLC Exam 3) ಹೆಸರು ನೋಂದಾಯಿಸಿದ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗಿದ್ದು, ಕೂಡಲೇ ಪಡೆದುಕೊಳ್ಳುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗದವರು, ಪ್ರಸಕ್ತ ಸಾಲಿನ ಮೊದಲ ಹಾಗೂ ಎರಡನೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸಿದವರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೂರನೇ ಅವಕಾಶ ನೀಡಿದ್ದು, ಆಗಸ್ಟ್‌ 2ರಿಂದ 9ರವರೆಗೆ ಪರೀಕ್ಷೆ ನಡೆಯಲಿದೆ. ಇದೀಗ ಅಭ್ಯರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ಮಂಡಳಿಯ ಜಾಲತಾಣದ ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.