ಮಂಗಳೂರು: ಕರಾವಳಿಯ ಜನಪ್ರಿಯ ಕಲೆ ಯಕ್ಷಗಾನ ಕುರಿತ ಅಂಚೆಚೀಟಿಯನ್ನು ಭಾನುವಾರ ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್‌ ಜನರಲ್ ಎಸ್.ರಾಜೇಂದ್ರ ಕುಮಾರ್‌ ಬಿಡುಗಡೆ ಗೊಳಿಸಿದರು.

5 ರೂ. ಮುಖ ಬೆಲೆಯ ಯಕ್ಷಗಾನ ಅಂಚೆ ಚೀಟಿಯಲ್ಲಿ ತೆಂಕು-ಬಡಗು ಎರಡೂ ತಿಟ್ಟುಗಳಿಗೆ ಸಮಾನ ಪ್ರಾಧಾನ್ಯತೆ ನೀಡಲಾಗಿದ್ದು, ಎರಡೂ ತಿಟ್ಟುಗಳ ರೇಖಾ ಚಿತ್ರವನ್ನು ಅಂಚೆ ಚೀಟಿಯಲ್ಲಿ ಮೂಡಿಸಲಾಗಿದೆ.

ಈ ಮೂಲಕ ಕರಾವಳಿ ಜಿಲ್ಲೆಯ ಕಲೆ ಯಕ್ಷಗಾನಕ್ಕೆ ರಾಷ್ಟ್ರೀಯ ಗೌರವ ಮನ್ನಣೆ ದೊರಕಿದಂತಾಗಿದೆ.

ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ ಮುದ್ದಣ, ಕೆರೆಮನೆ ಶಂಭುಹೆಗಡೆ, ಕೆರೆಮನೆ ಶಿವರಾಮ ಹೆಗಡೆಯವರ ಅಂಚೆಚೀಟಿ ಬಿಡುಗಡೆಗೊಂಡಿದೆ. ಆದರೆ ಪೂರ್ಣ ಪ್ರಮಾಣ ಯಕ್ಷಗಾನ ಕಲೆಗೆ ಸಂಬಂಧಿಸಿದಂತಹ ಅಂಚೆ ಚೀಟಿ ಇದೇ ಮೊದಲ ಬಾರಿಗೆ ಬಿಡುಗಡೆಯಾಗಿದೆ.

ಕೇಂದ್ರ ಸರಕಾರದ ಸ್ವಾಮ್ಯದ ಎಂಆರ್​ಪಿಎಲ್ ಸಂಸ್ಥೆ ಅಂಚೆ ಚೀಟಿ ಪ್ರಾಯೋಜಕತ್ವ ವಹಿಸಿದೆ. 5.30 ಲಕ್ಷ ರೂ. ಮೊತ್ತವನ್ನು ಅಂಚೆ ಇಲಾಖೆಗೆ ಒದಗಿಸಿದೆ. ರಾಜ್ಯ ಅಂಚೆ ಇಲಾಖೆಯ ಚೀಫ್ ಪೋಸ್ಟ್ ಮಾಸ್ಟರ್ ರಾಜೇಂದ್ರ ಕುಮಾರ್ ಈ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಈ ವೇಳೆ ಲೋಕಾಭಿರಾಮ ಯಕ್ಷಗಾನ ಪ್ರದರ್ಶನವು ನಡೆಯಿತು.

ಭಾರತೀಯ ಅಂಚೆ ಇಲಾಖೆ ಹೊರತಂದಿರುವ ಯಕ್ಷಗಾನದ ಅಂಚೆ ಚೀಟಿಯು ಕರಾವಳಿಯ ಸಾಂಪ್ರದಾ ಯಿಕ ಕಲೆ ಯಕ್ಷಗಾನವನ್ನು ವಿಶ್ವದಾ ದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಕಡಲತಡಿಯ ಭಾರ್ಗವ ಶಿವರಾಮ ಕಾರಂತ ಹಾಗೂ ದೈವಾರಾಧನೆಯ ಮಹತ್ವವನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಈ ಕುರಿತಂತೆಯೂ ಅಂಚೆ ಚೀಟಿಯನ್ನು ಕೂಡ ಹೊರತರುವಲ್ಲಿ ವಿಶೇಷ ಪ್ರಯತ್ನ ಮಾಡಲಾಗುವುದು ಎಂದರು.
ಶಾಸಕ ಡಿ. ವೇದವ್ಯಾಸ ಕಾಮತ್‌ಮಾತನಾಡಿ, ಅಂಚೆ ಚೀಟಿ ಮೂಲಕಯಕ್ಷಗಾನವನ್ನು ವಿಶ್ವಕ್ಕೆ ಪರಿಚಯ ವಾಗುತ್ತಿರುವುದು ಸೌಭಾಗ್ಯ ಎಂದರು.

ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಮಾತನಾಡಿ, ಅಂಚೆ ಚೀಟಿ ರಾಯಭಾರದ ಕೆಲಸವನ್ನು ಮಾಡುತ್ತಿದೆ. ಯಕ್ಷಗಾನಕ್ಕೆ ಯುನೆಸ್ಕೋ ಸ್ಥಾನಮಾನ, ಐಸಿಸಿಆರ್‌ ಮುಖೇನ ಕಾರ್ಯಕ್ರಮಗಳು ಹಾಗೂ ಅಯೋಧ್ಯೆಯ ಪ್ರತಿಷ್ಠಾ ವಾರ್ಷಿ ಕೋತ್ಸವದ ದಿನ ಸಮಗ್ರ ರಾಮಾಯಣ ಕುರಿತು 1 ವಾರ ಯಕ್ಷಗಾನಕ್ಕೆ ಅವಕಾಶ ಸಿಗಲಿ ಎಂದು ಆಶಿಸಿದರು.