ನವದೆಹಲಿ : ಮಧ್ಯಮ ವರ್ಗದವರ ಮೇಲಿನ ಹೊರೆಯನ್ನು ತಗ್ಗಿಸಿ ಅವರು ಕೊಳ್ಳುವಿಕೆ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ 15 ಲಕ್ಷ ರು.ವರೆಗೆ ಆದಾಯಕ್ಕೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಚಿಂತಿಸಿದೆ ಎಂದು ವರದಿಗಳು ತಿಳಿಸಿವೆ. ಈ ಕುರಿತ ಘೋಷಣೆಯನ್ನು ಮುಂದಿನ ವರ್ಷ ಫೆ.1ರಂದು ಮಂಡಿಸಲಾಗುವ ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ. 2020ರಲ್ಲಿ ಹೊಸ ತೆರಿಗೆ ಪದ್ಧತಿ ಜಾರಿಗೂ ಮುನ್ನ ಇದ್ಧ ಆದಾಯ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ತೆರಿಗೆ ಪಾವತಿದಾರರಿಗೆ ಮನೆ ಬಾಡಿಗೆ, ವಿಮೆ ಪ್ರೀಮಿಯಂ ಮೊದಲಾದ ವೆಚ್ಚಗಳಲ್ಲಿ ವಿನಾಯ್ತಿ ಇರುತ್ತಿತ್ತು.
ಆದರೆ ತೆರಿಗೆ ದರ ಹೆಚ್ಚಿರುತ್ತಿತ್ತು. 2020ರಲ್ಲಿ ಜಾರಿಗೊಳಿಸಿ ಪದ್ಧತಿಯಲ್ಲಿ ತೆರಿಗೆ ದರ ಕಡಿಮೆ ಮಾಡಲಾಗಿತ್ತು. ಆದರೆ ಮನೆ ಬಾಡಿಗೆ, ವಿಮೆ ಪ್ರೀಮಿಯಂ ಮೇಲಿನ ವಿನಾಯ್ತಿ ರದ್ದುಪಡಿಸಲಾಗಿತ್ತು. ಒಂದು ವೇಳೆ ತೆರಿಗೆ ಪಾವತಿ ಮಿತಿ ಹೆಚ್ಚಳ ಮಾಡಿದಲ್ಲಿ 2020ರಲ್ಲಿ ಪರಿಚಯಿಸಲಾದ ನೂತನ ತೆರಿಗೆ ಪದ್ಧತಿ ಅನ್ವಯ ತೆರಿಗೆ ಪಾವತಿ ಮಾಡುತ್ತಿದ್ದ ಕೋಟ್ಯಂತರ ಮಧ್ಯಮ ವರ್ಗದ ಜನತೆಗೆ ಭಾರೀ ಅನುಕೂಲವಾಗಲಿದೆ. ಈ ಯೋಜನೆಯಡಿ ಪ್ರಸ್ತುತ 3ರಿಂದ15 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.5ರಿಂದ ಶೆ.20ರವರೆಗೆ ತೆರಿಗೆ ವಿಧಿಸಲಾಗುತ್ತಿದೆ. ಅದಕ್ಕೂ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತಿದೆ.