ಬೆಳಗಾವಿ :
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗದ ವತಿಯಿಂದ ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್ .ಎಸ್. ತೇರದಾಳ ಮಾತನಾಡಿ, ನಮಗಿರುವುದು ಒಂದೇ ಭೂಮಿ. ಅದರ ಅಳಿವು ಉಳಿವಿನೊಂದಿಗೆ ಜೀವ ಸಂಕುಲದ ಅಳಿವು ಉಳಿವು ನಿಂತಿದೆ. ವಿವಿಧ ಮಾಲಿನ್ಯಗಳು ಮಣ್ಣನ್ನು ಕಲುಷಿತಗೊಳಿಸುತ್ತಿವೆ. ಇದರಿಂದಾಗಿ ಮಣ್ಣಿನ ಪೋಷಕಾಂಶಗಳು ಕಡಿಮೆಯಾಗುತ್ತಿವೆ. ಆಹಾರ ಉತ್ಪಾದನೆಯಲ್ಲಿ ಗಣನೀಯವಾಗಿ ಏರುಪೇರಾಗುತ್ತಿದೆ. ಇದರಿಂದಾಗಿ ಪ್ರಕೃತಿಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತಿದೆ. ಹಾಗಾಗಿ ಮಣ್ಣನ್ನು ರಕ್ಷಣೆ ಮಾಡಬಹುದಾದ ಎಲ್ಲಾ ಸಾಧ್ಯತೆಗಳನ್ನು ನಾವು ಬಳಸಿಕೊಳ್ಳಬೇಕು. ಆ ಮೂಲಕ ಜೀವಸಂಕುಲವನ್ನು ಉಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರ್ಜುನ್ ಜಂಬಗಿ ಮಾತನಾಡಿ , ಮಣ್ಣು ನಿಜವಾದ ಸಂಪತ್ತು. ನಮ್ಮ ಪರಿಸರ ವ್ಯವಸ್ಥೆ ಸರಿಯಾಗಿರಬೇಕಾದರೆ ಮಣ್ಣಿನ ಸುಸ್ಥಿರ ಸಂರಕ್ಷಣೆ ನಮ್ಮ ಮೊದಲ ಆದ್ಯತೆ ಆಗಬೇಕು. ಮಣ್ಣಿನ ಮೇಲ್ಪದರ ಮತ್ತು ಮಣ್ಣಿನ ವಿಧಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಈ ದಿನದ ನಿಮಿತ್ತ ಹಮ್ಮಿಕೊಂಡಿರುವ ಮಣ್ಣಿನ ಸಂಸರಕ್ಷಣೆಯಲ್ಲಿ ನಮ್ಮ ಪಾತ್ರ ಎಂಬ ವಿಷಯದ ಕುರಿತು ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ವಿಭಾಗದ ಮುಖ್ಯಸ್ಥ ಡಾ. ಅರುಣ್ ವಡ್ಡಿನ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಉಪನ್ಯಾಸಕಿ ನೀಲಾ ಬುರ್ಜಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ನಿಂಗಪ್ಪ ಪೂಜೇರಿ ನಿರೂಪಿಸಿದರು, ರವೀನಾ ಲಮಾಣಿ ವಂದಿಸಿದರು. ಡಾ. ದೀಪಿಕಾ ದೇವರಮನಿ ಮತ್ತು ಉಪನ್ಯಾಸಕ ವಿಕ್ರಮ್ ಗುಡೋಡಗಿ ಕಾರ್ಯಕ್ರಮ ಸಂಯೋಜಿಸಿದ್ದರು. ಬೋಧಕ- ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.