ಬೆಳಗಾವಿ:ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯ. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತದೆ ಎಂದು ಉಪ ಪ್ರಾಚಾರ್ಯ ಡಾ. ಅರ್ಜುನ ಜಂಬಗಿ ಅಭಿಪ್ರಾಯಪಟ್ಟರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಕ್ರೀಡಾ ವಿಭಾಗದ ವತಿಯಿಂದ ಏ. ೨೩ರಂದು ವಿದ್ಯಾರ್ಥಿಗಳಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ಮಾನವನ ಬದುಕಿನ ಅವಿಭಾಜ್ಯ ಅಂಗ. ಮನುಷ್ಯ ಕ್ರೀಡೆಯೊಂದಿಗೆ ಸದಾ ಸಾಗಬೇಕು. ಇಂದಿನ ಒತ್ತಡದ ಜೀವನದಲ್ಲಿ ಕ್ರೀಡೆ ಮನುಷ್ಯನನ್ನು ಮಾನಸಿಕ ಒತ್ತಡದಿಂದ ಹೊರತರುತ್ತದೆ. ಮೈದಾನಗಳು ಹೆಚ್ಚಾದಷ್ಟು ಆಸ್ಪತ್ರೆ ಕಡಿಮೆಯಾಗುತ್ತದೆ. ದುರ್ದೈವ ಆಸ್ಪತ್ರೆಗಳು ಇಂದು ಹೆಚ್ಚಾಗಿ ಮೈದಾನಗಳು ಕಡಿಮೆಗುತ್ತಿವೆ. ವಿದ್ಯಾರ್ಥಿಗಳಿಗೆ ದೇಶಿ ಕ್ರೀಡೆಗಳ ಪರಿಚಯ ಇಲ್ಲಿ ಸಿಗುತ್ತದೆ. ಕ್ರೀಡೆಯನ್ನೇ ತನ್ನ ಆಸಕ್ತಿ ಕ್ಷೇತ್ರವನ್ನಾಗಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಭವಿಷ್ಯವಿದೆ. ಕ್ರೀಡಾಳುಗಳು ತಮ್ಮ ಪ್ರತಿಭೆಯ ಮೂಲಕ ದೇಶದ ಕೀರ್ತಿಯನ್ನು ಜಗತ್ತಿನೆಲ್ಲೆಡೆ ಪಸರಿಸುತ್ತಿದ್ದಾರೆ. ಅದಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕಿಯಾದ ರೇಣುಕಾ ಜುಂಜವಾಡಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾ ಕಾರ್ಯದರ್ಶಿ ಶಿವಾನಂದ ವಾಣಿ ವಂದಿಸಿದರು. ವಿದ್ಯಾರ್ಥಿನಿ ವಿಜಯಲಕ್ಷ್ಮಿ ಹಡಪದ ನಿರೂಪಿಸಿದರು.ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.