ಉಡುಪಿ/ಕುಂದಾಪುರ : ಪ್ರಯಾಣಿಕರ ದಟ್ಟಣೆಯನ್ನು ಹಾಗೂ ಘಾಟ್ ಭಾಗದ ರೈಲು ಓಡಾಟದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಪರಿಗಣನೆಯಲ್ಲಿ ದೀಪಾವಳಿ ಹಬ್ಬದ ದಿನಗಳಂದು ಬೆಂಗಳೂರು-ಉಡುಪಿ-ಕಾರವಾರ ನಡುವೆ ಓಡಾಡುವ ಪಂಚಗಂಗಾ ರೈಲಿಗೆ ಹೆಚ್ವುವರಿ ಬೋಗಿಗಳನ್ನು ಅಳವಡಿಸುವಂತೆ ನಾನು ಸಲ್ಲಿಸಿದ ಕೋರಿಕೆಯನ್ನು ಪರಿಗಣಿಸಿ ನೈರುತ್ಯ ರೈಲ್ವೆಯು ಇದೀಗ ಹೆಚ್ವುವರಿ ಬೋಗಿ ಅಳವಡಿಕೆಯ ಪ್ರಕಟಣೆ ನೀಡಿದ್ದು ಇದಕ್ಕಾಗಿ ನಾನು ನೈರುತ್ಯ ರೈಲ್ವೆ ವಲಯಕ್ಕೆ ದನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಹಬ್ಬದ ದಟ್ಟಣೆಯ ಸಂದರ್ಭದಲ್ಲಿ ಬೇರೆ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಜೋಡಿಸುವುದು ಸಾಮಾನ್ಯವೇ ಆದರೂ ಪಂಚಗಂಗಾ ರೈಲು ಭಾರತೀಯ ರೈಲ್ವೆಯ ಅತೀ ಕಠಿಣ ಘಾಟ್ ಪ್ರದೇಶದಲ್ಲಿ ಅದೂ ಭಾರತೀಯ ರೈಲ್ವೆ ಸುರಕ್ಷತಾ ಆಯುಕ್ತರ ಸಲಹೆಯಂತೆ ಸಕಲೇಶಪುರ- ಸುಬ್ರಮಣ್ಯ ಘಾಟ್ ಭಾಗದಲ್ಲಿ ಓಡಾಟ ಮಾಡಬೇಕಿದೆ.
ಇಲ್ಲಿ ಅದಾಗಲೇ ಕಠಿಣ ಘಾಟ್ ಭಾಗದಲ್ಲಿ ಗಂಟೆಗೆ 30 KM ವೇಗದಲ್ಲಿ ಹಲವು ರೈಲುಗಳ ರಾತ್ರಿ ಸಂಚಾರ ಇರುವುದರಿಂದ ಹೆಚ್ಚು ಕೋಚ್ ಹಾಕಿದ ಕೂಡಲೇ ರೈಲುಗಳ ಕ್ರಾಸಿಂಗ್ ವ್ಯವಸ್ಥೆ ಬದಲಾಗಿ
ರೈಲುಗಳ ಸಮಯದಲ್ಲಿ ಭಾರೀ ವ್ಯತ್ಯಾಸ ಆಗುತ್ತದೆ.
ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಹಲವು ಅನುಮತಿಗಳನ್ನು ಸುರಕ್ಷತಾ ದೃಷ್ಟಿಯಿಂದ ಪಡೆದು ಹಬ್ಬಕ್ಕಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಈ ವಿಶೇಷ ತೀರ್ಮಾನ ಕೈಗೊಂಡಿದೆ.
ಪಂಚಗಂಗಾ ರೈಲಿಗೆ ಹೆಚ್ವುವರಿ ಬೋಗಿಯ ಜತೆ ಜತೆ 30ನೇ ತಾರೀಕಿನ ಮಧ್ಯಾಹ್ನ 1.30 ಕ್ಕೆ ಬೈಯಪ್ಪನಹಳ್ಳಿಯಿಂದ ಉಡುಪಿ-ಕುಂದಾಪುರ- ಕಾರವಾರ ಕಡೆ ವಿಶೇಷ ರೈಲೂ ನನ್ನ ಮನವಿಯಂತೆ ಈಗಾಗಲೇ ಪ್ರಕಟಣೆ ಆಗಿದ್ದು ಅದರ ಎಲ್ಲಾ ಸೀಟುಗಳೂ ಈಗಾಗಲೇ ಖಾಲಿಯಾಗಿವೆ.ಸಕಲೇಶಪುರ-ಸುಬ್ರಮಣ್ಯ ಘಾಟ್ ಭಾಗದ ಸುರಕ್ಷತೆಯನ್ನು ಪರಿಗಣಿಸುತ್ತಾ ಹೆಚ್ಚು ರೈಲುಗಳು ಕರಾವಳಿ ಕಡೆ ಬರುವಂತಾಗಲು ಮುಂದಿನ ದಿನಗಳಲ್ಲಿ ಹಲವು ಯೋಜನೆಗಳನ್ನು ಹೊಂದಲಾಗಿದ್ದು ಪ್ರಯಾಣಿಕರ ಸುರಕ್ಷತೆಗೆ ಹಾಗೂ ಸಮಯ ಪಾಲನೆಗೆ ಒತ್ತು ಕೊಟ್ಟು ಹೊಸ ರೈಲ್ವೇ ಯೋಜನೆಗಳೊಂದಿಗೆ ಶೀಘ್ರ ನಿಮ್ಮ ಮುಂದೆ ಬರಲಿದ್ದೇನೆ ಎಂದು ಅವರು ತಿಳಿಸಿದರು.