ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಯಾಗಿ ದೇವೇಂದ್ರ ಫಡ್ನವೀಸ್ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಗುರುವಾರ ಅವರ ಪ್ರಮಾಣವಚನಕ್ಕೆ ಭರದ ಸಿದ್ಧತೆ ನಡೆದಿದೆ. ಮಹಾಯುತಿ ಮತ್ತೆ ಅಧಿಕಾರಕ್ಕೆ ಬಂದಿದ್ದು ಫಡ್ನವೀಸ್ ಮುಖ್ಯಮಂತ್ರಿಯಾದರೆ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಅಂತಿಮವಾಗಿದೆ. ಆದರೆ, ಹಂಗಾಮಿ ಮುಖ್ಯಮಂತ್ರಿ ಏಕನಾಥ ಶಿಂದೆ ಬಣದಿಂದ ಏಕನಾಥ ಶಿಂದೆ ಅಥವಾ ಅವರ ಪುತ್ರ ಶ್ರೀಕಾಂತ ಶಿಂದೆ ಉಪಮುಖ್ಯಮಂತ್ರಿಯಾಗುತ್ತಾರೋ ಕಾದು ನೋಡಬೇಕಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ 9 ದಿನಗಳ ನಂತರ ಸರ್ಕಾರ ರಚನೆಯ ಕಸರತ್ತು ಚುರುಕು ಪಡೆದುಕೊಂಡಿದೆ.
ರಾಜ್ಯದ ಮುಂದಿನ ಮುಖ್ಯಮಂತ್ರಿ ಬಿಜೆಪಿಯವರಾಗುತ್ತಾರೆ ಎಂದು ಹಂಗಾಮಿ ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ ಅವರ ಜಂಟಿ ಹೇಳಿಕೆ ಮೂಲಕ ಸರ್ಕಾರ ರಚನೆಯ ಪ್ರಯತ್ನ ಅಂತಿಮ ಹಂತ ತಲುಪಿದೆ.
288 ಸ್ಥಾನಗಳ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ, ಶಿವಸೇನಾ ಹಾಗೂ ಎನ್‌ಸಿಪಿ ಪಕ್ಷಗಳ ಮಹಾಯುತಿ ಮೈತ್ರಿಯು 235 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಇದರಲ್ಲಿ ಬಿಜೆಪಿ 132, ಶಿವಸೇನಾ 57 ಹಾಗೂ ಎನ್‌ಸಿಪಿ 41 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿವೆ. ಆದರೆ ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಚರ್ಚೆ ಮುಂದುವರಿದಿತ್ತು. ಬಿಜೆಪಿಯ ದೇವೇಂದ್ರ ಫಡಣವೀಸ್ ಅಥವಾ ಶಿವಸೇನಾದ ಏಕನಾಥ ಶಿಂದೆ ಇಬ್ಬರಲ್ಲಿ ಯಾರು ಸಿಎಂ ಎಂಬ ಚರ್ಚೆಗಳು ಹುಟ್ಟುಹಾಕಿದ್ದವು.
ಮುಂಬೈನಲ್ಲಿ ನಡೆದ ಹಲವು ಸರಣಿ ಸಭೆಗಳ ನಂತರ ಆಯ್ಕೆಯ ಕಸರತ್ತು ದೆಹಲಿಗೆ ಸ್ಥಳಾಂತರಗೊಂಡಿತ್ತು. ಬಿಜೆಪಿಯ ಸಂಸದೀಯ ಮಂಡಳಿಯು ಗುಜರಾತ್‌ನ ವಿವೇಕ್ ರೂಪಾನಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ವೀಕ್ಷಕರಾಗಿ ರಾಜ್ಯಕ್ಕೆ ಕಳಿಸಲಾಗಿತ್ತು.
ಈ ಬೆಳವಣಿಗೆಗಳ ನಡುವೆಯೇ ರಾಜ್ಯದ ನೂತನ ಮುಖ್ಯಮಂತ್ರಿಯ ಪದಗ್ರಹಣಕ್ಕೆ ಮುಂಬೈನ ಆಜಾದ್ ಮೈದಾನದಲ್ಲಿ ಸಕಲ ಸಿದ್ಧತೆ ನಡೆದಿವೆ. ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಅವರ ನೇತೃತ್ವದ ತಂಡವು, ಸಿದ್ಧತೆಗಳನ್ನು ಪರಿಶೀಲಿಸಿದರು.
ಡಿ. 5ರಂದು ಸಂಜೆ 5.30 ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಮೈತ್ರಿಯಲ್ಲಿ ಯಾರಿಗೂ ಅಸಮಾಧಾನವಿಲ್ಲ. ಮಂಗಳವಾರ ಅಥವಾ ಬುಧವಾರ ಒಳಗಾಗಿ ಮುಖ್ಯಮಂತ್ರಿ ಯಾರು ಎಂಬುದು ಸ್ಪಷ್ಟವಾಗಲಿದೆ ಎಂದು ಬವಾಂಕುಲೆ ತಿಳಿಸಿದ್ದಾರೆ.
ಬಿಜೆಪಿಯು ಶಿಸ್ತಿನ ಪಕ್ಷವಾಗಿದೆ. ಮಹಾರಾಷ್ಟ್ರ ಬಯಸಿದ ವ್ಯಕ್ತಿಯೇ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ. ಒಂದೊಮ್ಮೆ ಜನರು ದೇವೆಂದ್ರ ಫಡಣವೀಸ್ ಅವರನ್ನೇ ಬಯಸಿದ್ದರೆ, ಅವರೇ ಆಗುತ್ತಾರೆ’ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಹಿರಿಯ ಮುಖಂಡರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇವರೊಂದಿಗೆ ಹಿರಿಯ ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ಹಾಗೂ ಮನರಂಜನಾ ಕ್ಷೇತ್ರದ
ಖ್ಯಾತನಾಮರು, ಕ್ರೀಡಾ ಸಾಧಕರು, ಸಾಹಿತಿಗಳು, ಸಾಧುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಹೆಸರು ಘೋಷಣೆಯಾಗುತ್ತಿದ್ದಂತೆ, ಮಹಾಯುತಿ ಮುಖಂಡರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಪ್ರಸ್ತಾವನೆ ಮಂಡಿಸಲಿದ್ದಾರೆ. ಆದರೆ ಮುಖ್ಯಮಂತ್ರಿಯೊಂದಿಗೆ, ಇಬ್ಬರು ಉಪಮುಖ್ಯಮಂತ್ರಿ ಇರಲಿದ್ದಾರೆಯೇ ಅಥವಾ ಯಾರೆಲ್ಲಾ ಮಂತ್ರಿ ಸ್ಥಾನ ಪಡೆಯಲಿದ್ದಾರೆ ಎಂಬುದು ಬಹಿರಂಗಗೊಂಡಿಲ್ಲ.
ಹಂಗಾಮಿ ಮುಖ್ಯಮಂತ್ರಿ ಶಿಂದೆ ಅವರು ಅನಾರೋಗ್ಯ ಕಾರಣ, ಠಾಣೆಯಲ್ಲಿರುವ ತಮ್ಮ ಮನೆಯಲ್ಲೇ ವಿಶ್ರಾಂತಿ ಪಡೆದಿದ್ದಾರೆ.