ಖಾನಾಪುರ :
ಸರಕಾರಿ ಅಧಿಕಾರಿಗಳು, ಸಾರ್ವಜನಿಕರು, ವ್ಯಾಪಾರಿಗಳು ಹಾಗೂ ಅಮಾಯಕರನ್ನು ಹೆದರಿಸಿ ಬೆದರಿಸುತ್ತಿದ್ದ ಬ್ಲ್ಯಾಕ್ ಮೇಲರ್ಸ್ ತಂಡದ ಪೈಕಿ ಐವರ ಮೇಲೆ ಎಫ್ ಐಆರ್ ದಾಖಲಾಗಿದೆ.

ಕೇಸ್ ದಾಖಲಿಸಿಕೊಂಡ ಖಾನಾಪುರ ಪೊಲೀಸರು ಆರೋಪಿತರಾದ ಶಶಿಧರ ಚಂದ್ರಪ್ಪ ನಾಯಕ(34), ಬಾಳಪ್ಪ @ಶರದ ಕಲ್ಲಪ್ಪ ಹೊನ್ನನಾಯಕ(55), ಶಶಿಕಾಂತ ತಳವಾರ, ರವಿ ಬಾಳಪ್ಪ ಮಾದಾರ(38) ಹಾಗೂ ಪಾಂಡುರಂಗ ಬಸಪ್ಪ ಗೂಳನ್ನವರ(38) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ಧ ಐಪಿಸಿ 384 ಸುಲಿಗೆ ಪ್ರಕರಣ ದಾಖಲಾಗಿದೆ.

ವ್ಯಕ್ತಿಯೊಬ್ಬರು ನೀಡಿದ ಲಿಖಿತ ದೂರಿನ ಅನ್ವಯ ಕಾರ್ಯಪ್ರವೃತ್ತರಾದ ಖಾನಾಪುರ ಠಾಣೆ ಪೊಲೀಸರು ಐಪಿಸಿ 384ಅಡಿ ದೂರು ದಾಖಲಿಸಿಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ಬಿದಿರು ವ್ಯಾಪಾರಿ ಚಂದ್ರಕಾಂತ ಮೇದಾರ ಎಂಬುವವರನ್ನು ಗಣೆಬೈಲ್ ಹತ್ತರಗುಂಜಿ ಬಳಿ ಅವರ ಬಿದಿರಿನ ಮಾಲಿನ ಜೊತೆ ಅಡ್ಡಗಟ್ಟಿ ಹಿಡಿದು, ಅವರಿಗೆ ಹಿಂಸೆ ಕೊಟ್ಟು 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಈ ಬ್ಲ್ಯಾಕ್ ಮೇಲರ್ಸ್ ತಂಡ ಕೊನೆಗೆ ಅವರಿಂದ 40 ಸಾವಿರ ನಗದು ಸುಲಿಗೆ ಮಾಡಿತ್ತು ಎನ್ನಲಾಗಿದೆ.
ಖಾನಾಪುರ ಸಮೀಪದ ಗಣೇಬೈಲ್ ಹತ್ತರಗುಂಜಿ ಬಳಿಯ ಕೆಎಫ್ ಡಿಸಿ ಸರಕಾರಿ ಬಿದಿರು ಮೇಳೆಯಿಂದ ಅಕ್ರಮವಾಗಿ ಬಿದಿರು ಸಾಗಾಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಇವರು ವ್ಯಾಪಾರಿ ಮೇಲೆ ಅಟ್ಟಹಾಸ ಮೆರೆದಿದ್ದರು. ಇದರ ಮಾಹಿತಿ ಪಡೆದಿದ್ದ ಅರಣ್ಯ ಅಧಿಕಾರಿಗಳು ಪರಿಸ್ಥಿತಿ ಅವಲೋಕಿಸಿ, ಬಿದಿರು ಸಾಗಾಣೆ ಅಧಿಕೃತ ಪರವಾನಿಗೆ ವ್ಯಾಪಾರಿಗೆ ಕೊಡಲಾಗಿದೆ, ನಿಯಮ‌ ಉಲ್ಲಂಘನೆ ಸಂಬಂಧ ದಂಡ ಕಟ್ಟಿಸಿಕೊಳ್ಳಲಾಗಿದೆ ಎಂಬುವುದನ್ನು ಸ್ಪಷ್ಟಪಡಿಸಿದ್ದರು.

ಇದಾದ ಬಳಿಕವೂ ಬಿದಿರು ವ್ಯಾಪಾರಿ ಚಂದ್ರಕಾಂತ ಮೇದಾರ ಅವರಿಗೆ ಹೆದರಿಸಿ ಬೆದರಿಸಿ, ಅವರಿಂದ ರೂ.40 ಸಾವಿರ ಹಣ ಬ್ಲ್ಯಾಕ್ ಮೇಲರ್ಸ್ ಪಡೆದುಕೊಂಡ ಬಗ್ಗೆ ಚಂದ್ರಕಾಂತ ಮೇದಾರ ಅವರು ಶನಿವಾರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಇಡೀ ಖಾನಾಪುರ ತಾಲೂಕಿನಾದ್ಯಂತ ಪತ್ರಕರ್ತರು ಎಂದು ಹೇಳಿಕೊಂಡು ಈ ಬ್ಲ್ಯಾಕ್ ಮೇಲರ್ಸ್ ತಂಡ ಅಟ್ಟಹಾಸ ಮೆರೆಯುತ್ತಿದ್ದರೂ ಇವರ ವಿರುದ್ಧ ಯಾರೊಬ್ಬರೂ ದೂರು ಸಲ್ಲಿಸಲು ಮುಂದಾಗಿರಲಿಲ್ಲ ಎನ್ನಲಾಗಿದೆ. ಪತ್ರಕರ್ತರು ಎಂದು ಹೇಳಿಕೊಂಡು ಜೊತೆಗೆ SC/ST ಕಾಯ್ದೆಗಳ ಅಡಿ ಕೇಸ್ ದಾಖಲಿಸುವುದಾಗಿ ಜನರನ್ನು ಹೆದರಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಇವರಿಂದ ಖಾನಾಪುರ ತಾಲೂಕಿನ ಸರಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂಧಿ ಜೊತೆಗೆ ಸಾಮಾಜಿಕ ಧುರಿಣರು ಹೆದರಿ ಹೈರಾಣಾಗಿದ್ದರು.