ಬೆಳಗಾವಿ : ಖಾನಾಪುರ ತಾಲೂಕಿನ ಮಾನ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಸೋಮವಾರ ಕರಡಿ ದಾಳಿಯಿಂದ ರೈತನ ಕಾಲು ತುಂಡಾಗಿದೆ. ರೈತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾನ ಗ್ರಾಮದ ಸಖಾರಾಮ ಗಾಂವಕರ (62) ದಾಳಿಗೆ ಒಳಗಾದವರು. ಅವರು ಪತ್ನಿಯೊಂದಿಗೆ ಜಾನುವಾರುಗಳ ಸಮೇತ ತಮ್ಮ ಹೊಲಕ್ಕೆ ಹೊರಟಿದ್ದರು. ಕಾಡುದಾರಿಯಲ್ಲಿ ಕರಡಿ ಎದುರಾಗಿದೆ. ಅದನ್ನು ಕಂಡ ಸಖಾರಾಮ ಪತ್ನಿಯನ್ನು ಮರದ ಮೇಲೆ ಹತ್ತಿಸಿದರು. ತಾವೂ ಮರ ಏರಬೇಕು ಎನ್ನುವಷ್ಟರಲ್ಲಿ ಓಡಿಬಂದ ಕರಡಿ ಕಾಲಿಗೆ ಕಚ್ಚಿದೆ. ಎಡಗಾಲನ್ನು ಬಾಯಲ್ಲಿ ಹಿಡಿದುಕೊಂಡು ಎಳೆದಾಡಿದೆ‌ ತಮ್ಮ ಕೈಯಲ್ಲಿದ್ದ ಕೊಯ್ತಾದಿಂದ ಕರಡಿಗೆ ಹೊಡೆದಾಗ ಅದು ಬಿಟ್ಟು ಓಡಿತು ಎಂದು ಸಖಾರಾಮ ತಿಳಿಸಿದ್ದಾರೆ.

ತುಂಡಾದ ಕಾಲಿನಿಂದ ತೀವ್ರ ರಕ್ತಸ್ರಾವವಾಯಿತು. ಸಖಾರಾಮ ತಮ್ಮ ಮೊಬೈಲ್‌ನಿಂದ ಪುತ್ರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಊರಿನ ಜನ ಗುಂಪಾಗಿ ಅವರನ್ನು ಹುಡುಕಾಡಲು ಶುರು ಮಾಡಿದರು. ಮಧ್ಯಾಹ್ನ 12ಕ್ಕೆ ದಾಳಿ ನಡೆಸಿದ್ದರೂ ಸಂಜೆ 5 ಕ್ಕೆ ಅವರು ಪತ್ತೆಯಾದರು.

ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಎಡಗಾಲನ್ನು ಬೇರ್ಪಡಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಖಾನಾಪುರ ಎಸಿಎಫ್ ಸುನೀತಾ ನಿಂಬರಗಿ ತಿಳಿಸಿದ್ದಾರೆ. ಕಣಕುಂಬಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.