ಬೆಳಗಾವಿ: ಈಗ ಈರುಳ್ಳಿ ಬೆಳೆದ ರೈತರಿಗೆ ಬಹುದೊಡ್ಡ ಶಾಕ್ ಆಗಿದೆ. ಈರುಳ್ಳಿಗೆ ಮಾರುಕಟ್ಟೆಯಲ್ಲಿ ಕೆಲವೊಮ್ಮೆದರ ಗಗನಕ್ಕೆ ಏರುತ್ತದೆ. ಕೆಲವೊಮ್ಮೆ ಏಕಾಏಕಿ ಕುಸಿಯುತ್ತದೆ. ಇದರಿಂದಾಗಿ ಈರುಳ್ಳಿ ಬೆಳೆಯುವ ರೈತರು ನೆಮ್ಮದಿಯ ಜೀವನ ಸಾಗಿಸುವ ಹಾಗಿಲ್ಲ. ಇದೀಗ ಮತ್ತೆ ಅಂತಹ ಪರಿಸ್ಥಿತಿ ಉದ್ಬವಗೊಂಡಿದೆ.

ಈರುಳ್ಳಿ ಹರಾಜು ಪ್ರಕ್ರಿಯೆಯಲ್ಲಿ ಏಕಾಏಕಿ ದರ ಕುಸಿತ, ದಲ್ಲಾಳಿಗಳ ಹಾವಳಿ ಖಂಡಿಸಿ ಸೋಮವಾರ ವಿವಿಧ ಜಿಲ್ಲೆಗಳ ಬೆಳೆಗಾರರು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಸೋಮವಾರ ನಡೆದ ಈರುಳ್ಳಿ ಹರಾಜು ಆರಂಭದಲ್ಲಿಯೇ ಉತ್ತಮ ಈರುಳ್ಳಿಗೆ ದಿಢೀರನೆ 900 ರಿಂದ 1,200 ರೂ. ಕಡಿಮೆ ಮಾಡಿ ಕ್ವಿಂಟಾಲ್ 2.200 ರಿಂದ 2,800 ರೂ. ದರ ನಮೂದಿಸಿದ್ದರು. ಕಡಿಮೆ ದರ್ಜೆಯ ಈರುಳ್ಳಿಗೆ ಕ್ವಿಂಟಾಲ್‌ಗೆ 450 ರಿಂದ 800 ರೂ. ದರ ನಿಗದಿ ಮಾಡುತ್ತಿರುವುದರಿಂದ ಆಕ್ರೋಶಗೊಂಡ ರೈತರು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಬಾಗಲಕೋಟೆ, ಬೆಳಗಾವಿ, ವಿಜಯಪುರ ಮತ್ತು ಧಾರವಾಡ ಜಿಲ್ಲೆಯ ರೈತರು ನಾಲ್ಕು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ.

ಹುಬ್ಬಳ್ಳಿ, ಬೆಂಗಳೂರು ಸೇರಿ ಮಾರುಕಟ್ಟೆಗಳಲ್ಲಿ ಉತ್ತಮ ದರ್ಜೆ ಈರುಳ್ಳಿ ಕ್ವಿಂಟಾಲ್‌ಗೆ ಕನಿಷ್ಠ 3,800 ರಿಂದ 4,900 ರೂ. ದರದಲ್ಲಿ ಮಾರಾಟವಾಗಿದೆ. ಆದರೆ, ಬೆಳಗಾವಿ ಎಪಿಎಂಸಿಯಲ್ಲಿ ಏಕಾಏಕಿ ಕ್ವಿಂಟಾಲ್‌ ಗೆ 1,200 ರೂ.ದರ ಕಡಿಮೆ ಮಾಡಿ ದರ ನಮೂದಿಸಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಈರುಳ್ಳಿ ನಿಗದಿ ಪಡಿಸುವವರೇ, ಖರೀದಿಸುವವರೇ ಇರುವುದರಿಂದ ರೈತರಿಗೆ ಮೋಸ ಮಾಡುತ್ತಿದ್ದಾರೆ. ಎಪಿಎಂಸಿ ಮಾರುಕಟ್ಟೆಯಲ್ಲಿ ದರ ನಿಗದಿ, ತೂಕದಲ್ಲಿ ದೊಡ್ಡ ಪ್ರಮಾಣದಲ್ಲಿ ವಂಚಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಕ್ರಮ ವಹಿಸುತ್ತಿಲ್ಲ ಎಂದು ಬೆಳೆಗಾರರು ದೂರಿದರು. ಸಗಟು ಮಾರುಕಟ್ಟೆಯಲ್ಲಿ ಉತ್ತಮ ದರ್ಜೆಯ ಈರುಳ್ಳಿ ಕ್ವಿಂಟಾಲ್ 2,200 ರಿಂದ 2,800 ರೂ.ಗೆ ಖರೀದಿಸುತ್ತಿರುವ ದಲ್ಲಾಳಿಗಳು ಚಿಲ್ಲರೆ ಮಾರುಕಟ್ಟೆಯಲ್ಲಿ 5,200 ರಿಂದ 6,700 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ. ಅಂಗಡಿಗಳಲ್ಲಿ ಸ್ಥಳೀಯ ಏಜೆಂಟರು ತಮ್ಮ ಲಾಭಕ್ಕಾಗಿ ರೈತರಿಂದ ಕಡಿಮೆ ದರದಲ್ಲಿ ಖರೀದಿಸುತ್ತಿದ್ದಾರೆ. ದರ ಪರಿಶೀಲನೆ ನಡೆಸಿದ ಬಳಿಕ ಈರುಳ್ಳಿ ಖರೀದಿ ಹರಾಜು ಪ್ರಕ್ರಿಯೇ ನಡೆಸಿ ಇಲ್ಲದಿದ್ದರೆ ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ರೈತರು ಮಾರುಕಟ್ಟೆ ಗೇಟ್‌ಗೆ ಬೀಗ ಹಾಕಿ ಪಟ್ಟುಹಿಡಿದು ಕುಳಿತುಕೊಂಡರು.

ಕೊನೆಗೂ ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ರೈತರು ಮತ್ತು ಖರೀದಿದಾರರ ಸಭೆ ನಡೆಸಿದರು. ಈರುಳ್ಳಿಯ ಗುಣಮಟ್ಟದ ಆಧಾರದ ಮೇಲೆ ಕ್ವಿಂಟಾಲ್ ಹೆಚ್ಚಿನ ದರಕ್ಕೆ ಖರೀದಿಸುವುದಾಗಿ ಭರವಸೆ ನೀಡಿದ ಬಳಿಕ ಧರಣಿ ಕೈಬಿಟ್ಟಿರು.