ಶಿರಸಿ: ಶಿರಸಿ ಹೈಟೆಕ್ ಆಸ್ಪತ್ರೆಗೆ ಸಂಬಂಧಿಸಿ ಸತ್ಯಕ್ಕಾಗಿ ಆಗ್ರಹಿಸಿ ಜನವರಿ 13 ರಂದು ಬೆಳಿಗ್ಗೆ 9 ಗಂಟೆಗೆ ಬಿಡ್ಕಿ ಬಯಲಿನಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಶಿರಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತಹಶೀಲ್ದಾರರ ಕಚೇರಿಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
ಬುಧವಾರ ಶಿರಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ದಿನದ ಹಿಂದೆ ಜಿಲ್ಲೆಯ ಎರಡು ಪತ್ರಿಕೆಗಳಲ್ಲಿ ಶಿರಸಿ ಸರ್ಕಾರಿ ಹೈಟೆಕ್ ಆಸ್ಪತ್ರೆಗೆ ಸಂಬಂಧಿಸಿ ಕ್ಷೇತ್ರದ ಶಾಸಕರು ಎರಡು ಭಿನ್ನ ಭಿನ್ನ ಹೇಳಿಕೆ ನೀಡಿದ್ದರಿಂದ ಕ್ಷೇತ್ರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಆಸ್ಪತ್ರೆ ವಿಚಾರ ಗಂಭೀರ ವಿಷಯವಾಗಿದ್ದರಿಂದ ಶಾಸಕರು ಈಗ ಉಂಟಾದ ಗೊಂದಲ ನಿವಾರಿಸಬೇಕು. ಅಲ್ಲದೆ, ಅವರು ಉಪವಾಸ ಸತ್ಯಾಗ್ರಹದ ಸ್ಥಳಕ್ಕಾಗಮಿಸಿ, ಆಸ್ಪತ್ರೆ ವಿಚಾರದಲ್ಲಿ ಸತ್ಯ ಏನು ಎಂಬುದನ್ನು ಜನರೆದುರು ತೆರೆದಿಡುತ್ತಾರೆ ಎಂಬ ವಿಶ್ವಾಸವಿದೆ. ಆಸ್ಪತ್ರೆ ವಿಚಾರದಲ್ಲಿ ಶಾಸಕರ ಬೆಂಬಲಕ್ಕೆ ನಾವಿದ್ದೇವೆ. ಆದರೆ ಅವರು ಸತ್ಯ ಏನು ಎಂಬುದನ್ನು ಜನತೆ ಮುಂದಿಡಬೇಕು ಎಂಬುದು ನಮ್ಮ ಒತ್ತಾಯ ಎಂದರು.
ಆಸ್ಪತ್ರೆಗೆ ಸಂಬಂಧಿಸಿ ಈಗಾಗಲೇ 112 ಕೋಟಿ ರೂ.ಗಳ ಸಿವಿಲ್ ಕಾಮಗಾರಿಗೆ ಅನುದಾನ ಮಂಜೂರಿಯಾಗಿ, ಟೆಂಡರ್ ಸಹ ಆಗಿ ಕೆಲಸ ನಡೆಯುತ್ತಿದೆ. ಹೀಗಾಗಿ ಹಾಲಿ ಶಾಸಕರು 44 ಕೋಟಿ ರೂ.ಗಳ ಅನುದಾನ ತಂದಿದ್ದಾರೆ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾರೇ ಶಾಸಕರಿದ್ದರೂ ಇಲಾಖೆಯ ಸಹಜ ಕೆಲಸದ ಪ್ರಕ್ರಿಯೆಯಿಂದ ಆ ಹಣ ಬರುತ್ತದೆ. ಆದರೆ ಈಗ ನಿಜವಾದ ಸಮಸ್ಯೆ ಆಸ್ಪತ್ರೆಯ ಯಂತ್ರೋಪಕರಣಗಳ ವಿಚಾರದಲ್ಲಿ ಇದೆ. ಯಂತ್ರೋಪಕರಣಗಳ ಖರೀದಿಗೆ ಘೋಷಿಸಿದ್ದ 30 ಕೋಟಿ ರೂ.ಗಳ ಅನುದಾನ ತರಲು ಶಾಸಕರು ಸರ್ಕಾರದ ಮಟ್ಟದಲ್ಲಿ ವಿಶೇಷ ಪ್ರಯತ್ನ ಮಾಡಬೇಕು. ಅದರ ಬದಲು ಈಗಾಗಲೇ ಮಂಜೂರಾಗಿರುವ ಕೆಲಸದ ಬಗ್ಗೆ ಅಲ್ಲ, ಇದರಲ್ಲಿ ಯಾವುದೇ ರಾಜಕೀಯವಿಲ್ಲ, ಈ ವಿಷಯದಲ್ಲಿ ನಾವೂ ಸಹ ಶಾಸಕರ ಬೆನ್ನಿಗೆ ನಿಂತು ಹೋರಾಡಲು ಸಿದ್ಧ ಎಂದು ಹೇಳಿದರು.
ಆಸ್ಪತ್ರೆಯ ವಿಚಾರದಲ್ಲಿ ನ್ಯಾಯ ಕೇಳಿದರೆ, ಸತ್ಯ ಹೇಳಿ ಎಂದರೆ ನನ್ನನ್ನು ಯಾವುದೋ ಪಕ್ಷಕ್ಕೆ ಸೀಮಿತಗೊಳಿಸಿ ವೈಯಕ್ತಿಕ ನಿಂದನೆ ಮಾಡುತ್ತಿದ್ದು, ಇದು ಶೋಭೆ ತರುವಂತಹದ್ದಲ್ಲ. ಇಲ್ಲಿ ಸತ್ಯ ಹೇಳುವ ಕೆಲಸವಾಗಬೇಕೇ ಹೊರತು ವೈಯಕ್ತಿಕ ನಿಂದನೆ ಮಾಡುವುದು ಸರಿಯಲ್ಲ ಎಂದರು.ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಹಾಲಪ್ಪ ಜಕ್ಕಣ್ಣನವತ ಮಾತನಾಡಿ, ನಾವು ಯಾವುದೇ ಪಕ್ಷದ ಪರವಾಗಿ, ವ್ಯಕ್ತಿ ಪರವಾಗಿ ಇಲ್ಲ. ಬದಲಾಗಿ ಶಾಸಕರಿಗೇ ಧ್ವನಿಯಾಗುವ ಪ್ರಯತ್ನ ಮಾಡುತ್ತಿದ್ದೇವೆ. ಜನರ ಸಮಸ್ಯೆಗೆ ಸ್ಪಂದಿಸುವ ಶಾಸಕ ಭೀಮಣ್ಣ ನಾಯ್ಕ ಅವರು ಆಸ್ಪತ್ರೆ ವಿಚಾರದಲ್ಲಿಯೂ ಜನಸಾಮಾನ್ಯರ ಪರ ನಿಲ್ಲುವ ಮೂಲಕ ನಮ್ಮ ಹೋರಾಟಕ್ಕೆ ಸ್ಪಂದಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಧುರೀಣರಾದ ಜಯಶೀಲ ಗೌಡ ಬನವಾಸಿ ಮಾತನಾಡಿ, ನಾವು ಸುಳ್ಳು ದಾಖಲೆ ಇಟ್ಟು ಮಾತನಾಡುತ್ತಿಲ್ಲ. ಶಾಸಕರಿಗೂ ಎಲ್ಲ ದಾಖಲೆಗಳು ಲಭ್ಯವಿದೆ. ಆಸ್ಪತ್ರೆ ವಿಚಾರದಲ್ಲಿ ಹೋರಾಟಗಾರರ ನಿಂದನೆ ಮಾಡುವುದು ಸರಿಯಲ್ಲ. ದಾಖಲೆಗಳಿಗೆ ಉತ್ತರ ನೀಡುವ ಪ್ರಯತ್ನ ಎಲ್ಲರಿಂದ ಆಗಲಿ ಎಂದರು.ಸಾಮಾಜಿಕ ಕಾರ್ಯಕರ್ತೆ ಉಷಾ ಹೆಗಡೆ ಮಾತನಾಡಿ, ಶಿರಸಿಗೆ ಸುಸಜ್ಜಿತ ಆಸ್ಪತ್ರೆ ಬೇಕೆನ್ನುವ ಕೂಗಿಗೆ ಈಗ ಹೈಟೆಕ್ ಆಸ್ಪತ್ರೆ ಕೆಲಸಗಳು ನಡೆಯುತ್ತಿದೆ. ಈ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಕ್ಷೇತ್ರದ ಜನಸಂಖ್ಯೆ ಗಮನಿಸಿದರೆ ಈ ಹೈಟೆಕ್ ಆಸ್ಪತ್ರೆ ಎಲ್ಲ ಸೌಕರ್ಯಗಳನ್ನು ಒಳಗೊಂಡು ತುರ್ತಾಗಿ ಕಾರ್ಯ ನಿರ್ವಹಿಸುವ ಅವಶ್ಯಕತೆ ಇದೆ ಎಂದರು.
ಶಿವಾನಂದ ದೇಶಳ್ಳಿ, ಅನಿಲ ನಾಯಕ ಶಿರಸಿ, ಹರೀಶ ಕರ್ಕಿ, ಜಿ.ಎಸ್. ಹೆಗಡೆ, ಚಿದಾನಂದ ಹರಿಜನ, ನಾಗರಾಜ ಜೋಶಿ ಮೊದಲಾದವರು ಇದ್ದರು.