ನವದೆಹಲಿ: ಮೂರು ವರ್ಷದ ಬಾಲಕ ಮತ್ತು ಆತನ 5 ವರ್ಷದ ಸಹೋದರ ಪೊಲೀಸರಿಗೆ ದೂರು ನೀಡಲು ಠಾಣೆಗೆ ಬಂದಿದ್ದು, ದುಃಖದ ನಡುವೆ ತಮ್ಮ ತಾಯಿಯನ್ನು ಥಳಿಸುತ್ತಾರೆ ಎಂದು ತಂದೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಪಿಲೋಖಾರಿ ಔಟ್‌ಪೋಸ್ಟ್ ಇನ್‌ಚಾರ್ಜ್ ರಾಹುಲ್ ಯಾದವ್ ಮಾತನಾಡಿ, ಪೊಲೀಸರು ಮಕ್ಕಳಿಗೆ ಟಾಫಿ ಮತ್ತು ಬಿಸ್ಕತ್‌ಗಳನ್ನು ನೀಡುವ ಮೂಲಕ ಅವರನ್ನು ಸಮಾಧಾನಪಡಿಸಿದರು ಮತ್ತು ನಂತರ ಅವರಿಂದ ವಿವರಗಳನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
“ತಾವು ಶ್ಯಾಮ್ ನಗರದಲ್ಲಿ ವಾಸಿಸುತ್ತಿದ್ದೇವೆ ಎಂದು ಮಕ್ಕಳು ಹೇಳಿದರು. ಅವರು ತಮ್ಮ ತಂದೆಯ ಹೆಸರು ಎಜಾಜ್ ಮತ್ತು ತಾಯಿಯ ಹೆಸರು ನಿಶಾ ಎಂದು ಹೇಳಿದರು. ತಮ್ಮ ಪೋಷಕರು ಆಗಾಗ್ಗೆ ಜಗಳವಾಡುತ್ತಾರೆ ಮತ್ತು ಎಜಾಜ್ ಅವರು ಪ್ರತಿ ಬಾರಿಯೂ ತಾಯಿಗೆ ಹೊಡೆಯುತ್ತಾರೆ ಎಂದು ಮಕ್ಕಳು ತಿಳಿಸಿದರು ಎಂದು ಯಾದವ್ ಹೇಳಿದರು.
ಮಂಗಳವಾರ ಈ ಮಕ್ಕಳ ತಂದೆ ಪುನಃ ತಾಯಿಗೆ ಹೊಡೆದಾಗ, ಏನು ಮಾಡಬೇಕು ಎಂದು ತಿಳಿಯದೆ ಕೊನೆಗೆ ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದೆವು ಎಂದು ಮಕ್ಕಳು ಪೊಲೀಸರಿಗೆ ತಿಳಿಸಿದರು. ಎಜಾಜ್ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಮಕ್ಕಳೊಂದಿಗೆ ಮನೆಗೆ ಕಳುಹಿಸಿರುವುದಾಗಿ ಯಾದವ್ ಹೇಳಿದ್ದಾರೆ.
“ಕಾನ್ಸ್‌ಟೇಬಲ್‌ಗಳು ಮಕ್ಕಳ ಪೋಷಕರು ಮತ್ತು ನೆರೆಹೊರೆಯವರೊಂದಿಗೆ ಮಾತನಾಡಿದರು.ದಂಪತಿ ಆಗಾಗ್ಗೆ ಜಗಳವಾಡುತ್ತಾರೆ ಮತ್ತು ಎಜಾಜ್ ಪ್ರತಿ ಬಾರಿ ಪೊಲೀಸರ ಬಳಿ ಹೋಗುವುದಾಗಿ ಹೇಳಿದಾಗ ನಿಶಾಗೆ ಥಳಿಸುತ್ತಿದ್ದ ಎಂದು ಅಕ್ಕಪಕ್ಕದವರು ಹೇಳಿದ್ದಾರೆ. ಪೊಲೀಸರು ಮಾತ್ರ ತನ್ನ ಗಂಡನಿಂದ ತನ್ನನ್ನು ರಕ್ಷಿಸಬಹುದು ಎಂದು ನಿಶಾ ತನ್ನ ಮಕ್ಕಳಿಗೆ ಹೇಳಿದ್ದಳು ಎಂದು ಯಾದವ್ ಹೇಳಿದರು.ಕಾನ್‌ಸ್ಟೆಬಲ್‌ಗಳು ದಂಪತಿಗೆ ಜಗಳವಾಡದಂತೆ ಸಲಹೆ ನೀಡಿದರು. ಭವಿಷ್ಯದಲ್ಲಿ ಎಜಾಜ್ ವಿರುದ್ಧ ಮತ್ತೆ ದೂರು ಬಂದರೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಚ್ಚರಿಸಿದ್ದಾರೆ ಎಂದು ಯಾದವ್ ಹೇಳಿದರು.