ಬೆಳಗಾವಿ : ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಫೆ.28 ಮತ್ತು 29 ರಂದು ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವ 2024ರ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. ಫೆ.28ರಂದು ಬೆಳಗ್ಗೆ 10ಕ್ಕೆ ಮಲ್ಲಮ್ಮ ವೃತ್ತದಲ್ಲಿ ಬೆಳವಡಿ ಮಲ್ಲಮ್ಮನ ವಿಜಯ ಜ್ಯೋತಿ ಬರಮಾಡಿಕೊಳ್ಳಲಾಗುತ್ತಿದೆ. ಶಾಸಕ ಮಹಾಂತೇಶ ಕೌಜಲಗಿ ಸಂಸ್ಥಾನದ ಧ್ವಜಾರೋಹಣ ನೆರವೇರಿಸಿ, ವಸ್ತು ಪ್ರದರ್ಶನ ಉದ್ಘಾಟಿಸುವರು. ಬೆಳಗ್ಗೆ 10.15ಕ್ಕೆ ಸಂಸದೆ ಮಂಗಲಾ ಅಂಗಡಿ ಜಾನಪದ ಕಲಾವಾಹಿನಿ ಉದ್ಘಾಟಿಸುವರು. ಮುಖ್ಯ ವೇದಿಕೆಯಲ್ಲಿ ಸಂಜೆ 5 ರಿಂದ ರಾತ್ರಿ 11ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ ತಂಡದಿಂದ ರಸಮಂಜರಿ ನಡೆಯಲಿದೆ. ಸಂಜೆ 7ಕ್ಕೆ ವೀರರಾಣಿ ಬೆಳವಡಿ ಮಲ್ಲಮ್ಮ ವೇದಿಕೆಯಲ್ಲಿ ಹೂಲಿ ಹಿರೇಮಠದ ರಾಜಗುರು ಸಂಸ್ಥಾನದ ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉತ್ಸವ ಉದ್ಘಾಟಿಸುವರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಗಮಿಸುವರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ವಿವಿಧ ಮತಕ್ಷೇತ್ರದ ಶಾಸಕರು, ಸಂಸದರು, ರಾಜ್ಯ ಸಭಾ ಸದಸ್ಯರು, ಅನೇಕ ಗಣ್ಯಮಾನ್ಯರು, ಅಧಿಕಾರಿಗಳು ಪಾಲ್ಗೊಳ್ಳುವರು. ಸಚಿವ ಶಿವರಾಜ ತಂಗಡಗಿ ಅವರು ಮೈಸೂರಿನ ರಾಮಣ್ಣ ತಟ್ಟಿ ರಚಿಸಿದ ಬೀಳದ ಬೆಳವಡಿ ಆ 27 ದಿನಗಳು ಪುಸ್ತಕ ಬಿಡುಗಡೆ ಮಾಡುವರು. ಫೆ.29ರಂದು ಬೆಳಗ್ಗೆ 11ಕ್ಕೆ ಮಲ್ಲಮ್ಮ ಸ್ಮಾರಕ ಭವನದಲ್ಲಿ ವಿಚಾರ ಸಂಕಿರಣವನ್ನು ಗದಗ ನಿವೃತ್ತ ಪ್ರಾಧ್ಯಾಪಕಿ ಡಾ. ಶಂಕುಂತಲಾ ಸಿಂಧೂರ ಉದ್ಘಾಟಿಸಿ, ಬೆಳವಡಿ ಸಂಸ್ಥಾನದ ಸಮಕಾಲೀನ ಸಂಸ್ಥಾನಗಳು ಮತ್ತು ರಾಣಿಯರು ವಿಷಯ ಕುರಿತು ಉಪನ್ಯಾಸ ನೀಡುವರು.