ಮಂಗಳೂರು: ಕುತ್ತಾರು ದೆಕ್ಕಾಡಿನ ಶ್ರೀ ಕೊರಗಜ್ಜ ದೈವದ ಆದಿಸ್ಥಳಗಳ ಆಡಳಿತ ಮಂಡಳಿಯ ಸುಪರ್ದಿಯಲ್ಲಿರುವ ನಡೆಯುವ ಎಲ್ಲಾ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ನಡೆಯುತ್ತಿವೆ. ಇದರ ವಿರುದ್ಧ ಡಿವೋಟಿಸ್ ಆಫ್ ಕುತ್ತಾರು ಕೊರಗಜ್ಜ ಎಂಬ ಶಿರೋನಾಮೆಯಡಿ ಖಾತೆ ತೆರೆದು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿರುವ ಸಂಸ್ಥೆಯ ವಿರುದ್ಧ ಇದೀಗ ಕುತ್ತಾರು ಕೊರಗಜ್ಜ ದೈವಸ್ಥಾನದ ಆಡಳಿತ ಮಂಡಳಿ ಈಗ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದೆ.
ಕೊರಗಜ್ಜನ ಆಡಳಿತ ಮಂಡಳಿ ಯಾವುದೇ ಉದ್ದೇಶಕ್ಕೆ ಆನ್ಲೈನ್ ಮೂಲಕ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿಲ್ಲ, ಕೊರಗಜ್ಜ ದೈವದ ಮೇಲೆ ಸಾರ್ವಜನಿಕರಿಗೆ ಇರುವ ಭಕ್ತಿಯನ್ನೇ ಪ್ರಧಾನವಾಗಿ ಇರಿಸಿಕೊಂಡು ಡಿವೋಟಿಸ್ ಆಫ್ ಕೊರಗಜ್ಜ ಎಂಬ ಫೇಸ್ಬುಕ್ ಖಾತೆಯಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಶ್ರೀ ಕ್ಷೇತ್ರದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುವುದು ಕಾನೂನುಬಾಹಿರವಾಗಿದೆ. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ. ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.