ಬೆಳಗಾವಿ : ಕೊನೆಗೂ ಬೆಳಗಾವಿಗೆ ವಂದೇ ಭಾರತ್ ರೈಲು ಬರಲಿದೆ. ಇದು ಬೆಳಗಾವಿ-ಪುಣೆ ನಗರವನ್ನು ಬೆಸೆಯಲಿದೆ.

ಕಳೆದ ಹಲವು ತಿಂಗಳಿನಿಂದ ಬೆಳಗಾವಿ ಜನತೆಯ ನಿರೀಕ್ಷೆಯಲ್ಲಿದ್ದ ವಂದೇ ಭಾರತ್ ರೈಲು ಸೇವೆ ಶೀಘ್ರ ಆರಂಭವಾಗಲಿದ್ದು, ಬೆಳಗಾವಿಯಿಂದ ಪುಣೆಗೆ ತೆರಳುವ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಪುಣೆ-ಹುಬ್ಬಳ್ಳಿ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಆರಂಭಿಸಲು ರೈಲ್ವೆ ಇಲಾಖೆ ಪ್ರಯತ್ನ ಆರಂಭಿಸಿದೆ. ಹಾಗಾಗಿ ಬೆಳಗಾವಿಯ ನಾಗರಿಕರು ಈಗ ಅತಿವೇಗದಲ್ಲಿ ಸಂಚರಿಸಲಿರುವ ವಂದೇ ಭಾರತ್ ಮೂಲಕ ಪುಣೆ ತಲುಪಲು ಸಾಧ್ಯವಾಗುತ್ತದೆ.

ಪುಣೆ-ಬೆಂಗಳೂರು ರೈಲು ಮಾರ್ಗದಲ್ಲಿ ವಿದ್ಯುದ್ದೀಕರಣದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಮೀರಜ್‌ನಿಂದ ಕುಡಚಿವರೆಗೆ ಕೊನೆಯ ಹಂತದ ವಿದ್ಯುದ್ದೀಕರಣದೊಂದಿಗೆ ಪುಣೆ-ಬೆಂಗಳೂರು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಬೆಳಗಾವಿ-ಬೆಂಗಳೂರು ಮಾರ್ಗದಲ್ಲಿ ಈಗಾಗಲೇ ವಂದೇ ಭಾರತ್ ಪರೀಕ್ಷೆ ನಡೆಸಲಾಗಿದೆ. ಆದರೆ ಸಮಯದ ಕೊರತೆಯಿಂದಾಗಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಲಾಯಿತು. ಇದಾದ ನಂತರ ಭಾರತೀಯ ರೈಲ್ವೇ ಬೆಳಗಾವಿ-ಪುಣೆ ಮಾರ್ಗದಲ್ಲಿ ವಂದೇ ಭಾರತ್ ಆರಂಭಿಸಲು ಒಪ್ಪಿಗೆ ನೀಡಿತ್ತು. ಕಳೆದ ಒಂದು ತಿಂಗಳಿನಿಂದ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಾಗಿ ಎಲ್ಲಾ ರೈಲು ನಿಲ್ದಾಣಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತಿದೆ.

ಬೆಳಗ್ಗೆ 5 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ ವಂದೇ ಭಾರತ್ ಬೆಳಗ್ಗೆ 7 ಗಂಟೆಗೆ ಬೆಳಗಾವಿ ತಲುಪಲಿದೆ. ಬಳಿಕ ಬೆಳಗಾವಿಯಿಂದ ಮೀರಜ್, ಸಾಂಗ್ಲಿ, ಸತಾರಾ ಮಾರ್ಗವಾಗಿ ಮಧ್ಯಾಹ್ನ 1.30ಕ್ಕೆ ಪುಣೆ ತಲುಪಲಿದೆ. ಅದೇ ರೀತಿ ಪುಣೆಯಿಂದ ಮಧ್ಯಾಹ್ನ 2:15 ಕ್ಕೆ ಹುಬ್ಬಳ್ಳಿಗೆ ಹೊರಡುವ ರೈಲು ರಾತ್ರಿ 8:40 ಕ್ಕೆ ಬೆಳಗಾವಿ ತಲುಪಲಿದೆ. ಏತನ್ಮಧ್ಯೆ, ಈ ವಂದೇ ಭಾರತ್ ಕುರಿತು ರೈಲ್ವೆ ಇಲಾಖೆಯಿಂದ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ.

ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಬೆಳಗಾವಿಯಲ್ಲಿ ಸೆಪ್ಟೆಂಬರ್ 17ರಿಂದ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ.