ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಪ್ರತ್ಯಕ್ಷರಾಗಿದ್ದಾರೆ.
ಬರೋಬ್ಬರಿ ಒಂದು ತಿಂಗಳ ಬಳಿಕ ವಿದೇಶದಲ್ಲಿದ್ದುಕೊಂಡು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಇದೇ ಮೇ 31ರಂದು ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣ ಅವರಿಗೆ ತಕ್ಷಣವೇ ಕರ್ನಾಟಕಕ್ಕೆ ವಾಪಸ್ ಆಗಬೇಕು ಹಾಗೂ ಈ ನೆಲದ ಕಾನೂನು ಗೌರವಿಸಬೇಕು ಎಂದು ಅಜ್ಜ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬಹಿರಂಗ ಪತ್ರ ಬರೆದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಅವರು ಭಾರತಕ್ಕೆ ಬರುವುದಾಗಿ ಘೋಷಣೆ ಮಾಡಿದ್ದಾರೆ.
ಈ ಕುರಿತು ವಿದೇಶದಲ್ಲಿದ್ದುಕೊಂಡೇ ವಿಡಿಯೋ ಬಿಡುಗಡೆ ಮಾಡಿರುವ ಪ್ರಜ್ವಲ್ ರೇವಣ್ಣ, “ನಾನು ಏಪ್ರಿಲ್ 26 ರಂದು ವಿದೇಶಕ್ಕೆ ತೆರಳುವುದು ಪೂರ್ವನಿಗದಿಯಾಗಿತ್ತು” ಎಂದು ಹೇಳಿದ್ದಾರೆ. ಹಾಗೂ ಮೇ 31ರಂದು ಭಾರತಕ್ಕೆ ಬಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
“ನಾನು ಎಲ್ಲಿಯೂ ಓಡಿ ಹೋಗಿಲ್ಲ. ನಾನು ವಿದೇಶದಲ್ಲಿ ಎಲ್ಲಿದ್ದೇನೆ ಎಂದು ಮಾಹಿತಿ ಕೊಡದಿರುವುದಕ್ಕೆ ರಾಜ್ಯದ ಜನತೆ, ಜೆಡಿಎಸ್ ಕಾರ್ಯಕರ್ತರು, ತಮ್ಮ ತಂದೆ, ತಾಯಿ, ತಾತ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕುಟುಂಬದವರ ಬಳಿ ಕ್ಷಮೆ ಕೇಳುತ್ತೇನೆ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ನನ್ನ ವಿರುದ್ಧ ಕೆಲವು ಶಕ್ತಿಗಳು ಒಟ್ಟಾಗಿ ನನ್ನ ವಿರುದ್ಧ ಪಿತೂರಿ ನಡೆಸಿವೆ. ನಾನು ನನ್ನ ತಾತ, ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆಯಾಚಿಸುತ್ತೇನೆ. ನಾನು ಮೇ 31ರಂದು ಬೆಳಗ್ಗೆ 10 ಗಂಟೆಗೆ ಭಾರತಕ್ಕೆ ಬಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ಆದರೂ, ನಾನು ಭಾರತಕ್ಕೆ ಬಂದು ವಿಚಾರಣೆ ಎದುರಿಸುತ್ತೇನೆ” ಎಂದು ಪ್ರಜ್ವಲ್ ರೇವಣ್ಣ ವೀಡಿಯೊ ತಿಳಿಸಿದ್ದಾರೆ.
ನನಗೆ ಕಾನೂನಿನ ಮೇಲೆ ಅಪಾರ ಗೌರವವಿದೆ. ನನ್ನ ವಿರುದ್ಧ ಮಾಡಿದ ಆರೋಪಗಳನ್ನು ಕೇಳಿ ನನಗೆ ಆಘಾತವಾಯಿತು. ಇದೇ ಕಾರಣಕ್ಕಾಗಿ ನಾನು ಕೆಲ ದಿನಗಳಿಂದ ಐಸೋಲೇಷನ್‌ನಲ್ಲಿ ಇದ್ದೆ. ನನ್ನ ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ನಾನು ವಿದೇಶಕ್ಕೆ ಬಂದ ಬಳಿಕ ಪ್ರಕರಣ ದಾಖಲಾದ ಬಗ್ಗೆ ತಿಳಿಯಿತು. ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆಸಿದರು. ಆದರೂ, ನಾನು ರಾಜ್ಯಕ್ಕೆ ಆಗಮಿಸಿ ತನಿಖೆಗೆ ಸಹಕಾರ ನೀಡುತ್ತೇನೆ. ನಾನು ಈ ಪ್ರಕರಣದಿಂದ ಆರೋಪಮುಕ್ತನಾಗಿ ಹೊರಬರುತ್ತೇನೆ ಎಂಬ ವಿಶ್ವಾಸ ನನಗಿದೆ” ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಪ್ರಜ್ವಲ್ ರೇವಣ್ಣ ಅವರಿಗೆ ಬಹಿರಂಗ ಪತ್ರ ಬರೆದಿದ್ದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ವಾಪಸ್ ಆಗಿ ತನಿಖೆ ಎದುರಿಸುವಂತೆ ಸೂಚಿಸಿದ್ದರು. ಎಚ್ಚರಿಕೆಯನ್ನೂ ನೀಡಿದ್ದರು.