ಬೆಳಗಾವಿ :
ನ್ಯಾಯವಾದಿಗಳ ಮೇಲೆ ಅಲ್ಲಲ್ಲಿ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಮತ್ತು ಹಿಂಸಾಚಾರ ನಡೆಯುವ ಹಾಗೂ ಶಿಕ್ಷೆ ವಿಧಿಸುವ ನ್ಯಾಯವಾದಿಗಳ ಮೇಲೆ ಹಿಂಸಾಚಾರ ವಿಧೇಯಕ ರಾಜ್ಯದಲ್ಲಿ ಜಾರಿಯಾಗಲಿದೆ. ಇದು ತೊಂದರೆಗೊಳಗಾಗುವ ವಕೀಲರಿಗೆ ಇನ್ಮುಂದೆ ರಕ್ಷಣೆ ಒದಗಿಸಲಿದೆ.
ವಕೀಲರಿಗೆ ರಕ್ಷಣೆ ನೀಡುವ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆ-2023 ನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಚಿಕ್ಕಮಗಳೂರಿನಲ್ಲಿ ಯುವ ವಕೀಲರೊಬ್ಬರ ಮೇಲೆ ಪೊಲೀಸರ ದೌರ್ಜನ್ಯ ಹಾಗೂ ಕಲ್ಬುರ್ಗಿ ವಕೀಲರೊಬ್ಬರನ್ನು ಅಟ್ಟಾಡಿಸಿಕೊಂಡು ಹೋಗಿ ಭೀಕರವಾಗಿ ಕೊಲೆಗೈದ ಹಿನ್ನೆಲೆಯಲ್ಲಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರದ ಮೇಲೆ ವಕೀಲರು ಒತ್ತಡ ಹೇರಿದ್ದರು. ಕೊನೆಗೂ ರಾಜ್ಯ ಸರ್ಕಾರ ಈ ಐತಿಹಾಸಿಕ ಮಸೂದೆ ಜಾರಿಗೆ ಮುಂದಾಗಿದೆ.
ಬೆದರಿಕೆ, ಅಡ್ಡಿ, ಕಿರುಕುಳ ಅಥವಾ ಅವರೊಂದಿಗೆ ಅನುಚಿತ ಹಸ್ತಕ್ಷೇಪ ರಹಿತವಾಗಿ ತಮ್ಮ ಎಲ್ಲ ವೃತ್ತಿಪರ ಪ್ರಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವುದು, ದೇಶ-ವಿದೇಶಗಳಲ್ಲಿ ಮುಕ್ತವಾಗಿ ಪ್ರಯಾಣಿಸುವುದು, ಅವರ ಕಕ್ಷಿದಾರರೊಂದಿಗೆ ಸಮಾಲೋಚಿಸಲು ಅನುಕೂಲ ಆಗುವಂತೆ ಹಾಗೂ ಯಾವುದೇ ಭಯ ಅಥವಾ ಬಾಹ್ಯ ಪ್ರಭಾವಕ್ಕೆ ಒಳಗಾಗದೆ ತಮ್ಮ ವೃತ್ತಿಪರ ಸೇವೆ ಸಲ್ಲಿಸುವುದಕ್ಕಾಗಿ ಹಾಗೂ ಅದಕ್ಕೆ ಸಂಬಂಧಿಸಿದ ಪ್ರಾಸಂಗಿಕ ವಿಷಯಗಳಿಗೆ ಅವರ ಮೇಲಿನ ಹಿಂಸೆಯನ್ನು ನಿಷೇಧಿಸುವುದು ಮತ್ತು ಅವರಿಗೆ ರಕ್ಷಣೆ ನೀಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.
ವಕೀಲರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ 6 ತಿಂಗಳಿಂದ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ವಾಸ ಅಥವಾ 1 ಲಕ್ಷ ರೂ.ವರೆಗೆ ವಿಸ್ತರಿಸಬಹುದಾದ ದಂಡಕ್ಕೆ ಒಳಗಾಗಬೇಕಾಗುತ್ತದೆ ಎಂಬುದನ್ನು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.