ಬಾಗಲಕೋಟೆ : ನ್ಯಾಯಾಧೀಶೆಯಾಗುವ ನನ್ನ ಕನಸನ್ನು ನನಸಾಗಿಸಿಕೊಂಡಿದ್ದೇನೆ. ತಂದೆಯ ಹಠವೇ ನನ್ನ ಸಾಧನೆಗೆ ಪ್ರೇರಣೆ. ತಂದೆ-ತಾಯಿಯ ತ್ಯಾಗದಿಂದ ನ್ಯಾಯಾಧೀಶೆಯಾಗಲು ಕಾರಣವಾಯಿತು.

ಇದು ಭಾಗ್ಯಶ್ರೀ ಅವರ ಸಂತಸದಾಯಕ ಪ್ರತಿಕ್ರಿಯೆ.
ಬಾಗಲಕೋಟೆಯ ಗಂಗೂರ ಗ್ರಾಮದ ಭಾಗ್ಯಶ್ರೀ ಮಾದರ ಬಡ ಕುಟುಂಬದವರು. ತಂದೆ, ತಾಯಿ ಕೂಲಿ ಮಾಡಿ ಮಕ್ಕಳನ್ನು ಓದಿಸಿದ್ದರು. ಕನ್ನಡ ಮಾಧ್ಯಮದಲ್ಲಿ ಓದಿದ್ದ ಭಾಗ್ಯಶ್ರೀ 2023ರಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇದೀಗ ಸಿವಿಲ್‌ ನ್ಯಾಯಾಧೀಶೆಯಾಗಿ ಆಯ್ಕೆ ಆಗಿದ್ದಾರೆ.

ಎಲ್ಎಲ್​ಬಿ ಪದವಿಯನ್ನು ನಂದಿಮಠ ಕಾಲೇಜಿನಲ್ಲಿ ಪಡೆದ ಭಾಗ್ಯಶ್ರೀಗೆ ತಾವು ಸೋತಾಗ, ತಾಳ್ಮೆ ಕಳೆದುಕೊಂಡ ಮಹಾಭಾರತ, ಭಗವದ್ಗೀತೆಯೇ ಸ್ಫೂರ್ತಿ ಅಂತೆ. ಡಾ. ಬಿ.ಆರ್‌. ಅಂಬೇಡ್ಕರ್ ಅವರ ರೀತಿಯಲ್ಲಿ ಕರ್ತವ್ಯದಲ್ಲಿ ನಿರತಳಾಗಬೇಕೆಂದು ಆಸೆ ಹೊಂದಿದ್ದಾರೆ. ಮುಂದಿನ ದಿನದಲ್ಲಿ ಜಿಲ್ಲಾ ನ್ಯಾಯಾಧೀಶೆಯಾಗುವ ಗುರಿ ಇದ್ದು, ಇದಕ್ಕಾಗಿ ತಯಾರಿ ನಡೆಸುವುದಾಗಿ ತಿಳಿಸಿದ್ದಾರೆ.

ಭಾಗ್ಯಶ್ರೀ ತಂದೆ ದುರ್ಗಪ್ಪ, ತಾಯಿ ಯಮನವ್ವ ಬಡವರು. ಕೂಲಿನಾಲಿ ಮಾಡುವ ಈ ದಂಪತಿ ಇಬ್ಬರೂ ಅನಕ್ಷರಸ್ಥರಾದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವ ಕೊರತೆ ಮಾಡಿರಲಿಲ್ಲ. ದುರ್ಗಪ್ಪ, ಯಮನವ್ವ ದಂಪತಿಯ ಏಳು ಮಕ್ಕಳ ಪೈಕಿ ಭಾಗ್ಯಶ್ರೀ 5ನೆಯವರು. 2018ರಲ್ಲಿ ಕಾನೂನು ಪದವಿ ಪಡೆದ ಭಾಗ್ಯಶ್ರೀ, ಹುನಗುಂದ ಕೋರ್ಟ್​ನಲ್ಲಿ 2018-20ರವರೆಗೆ ಎರಡು ವರ್ಷಗಳ ಕಾಲ ವಕೀಲ ವೃತ್ತಿ ಆರಂಭಿಸಿದ್ದರು.

2021-22ರವರೆಗೆ ಹೈಕೋರ್ಟ್​ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ಶುರು ಮಾಡಿದ್ದ ಭಾಗ್ಯಶ್ರೀ, ಲಾ ಕ್ಲರ್ಕ್ ಕಂ ರಿಸರ್ಚ್ ಅಸಿಸ್ಟೆಂಟ್ ಹುದ್ದೆ ನಿರ್ವಹಣೆ ಮಾಡುತ್ತಿದ್ದರು. ಕೆಲಸದ ಜತೆಗೆ ನ್ಯಾಯಾಧೀಶೆ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿದ್ದರು.

2021ರಲ್ಲಿ ಮೊದಲ ಬಾರಿ ಪರೀಕ್ಷೆ ಬರೆದಾಗ ಪಾಸ್‌ ಆಗಿದ್ದ ಭಾಗ್ಯಶ್ರೀ ಮೌಖಿಕ ಸಂದರ್ಶನದಲ್ಲಿ ಆಯ್ಕೆ ಆಗಿರಲಿಲ್ಲ. ಆದರೆ ಪ್ರಯತ್ನ ಬಿಡದೇ 2022ರಲ್ಲಿ ಮತ್ತೊಮ್ಮೆ ಎಲ್ಲ ಪರೀಕ್ಷೆಗಳನ್ನೂ ಪಾಸ್ ಮಾಡಿದ್ದರು. ಮತ್ತೆ ಮೌಖಿಕ ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಿಸದೇ ಅವಕಾಶವನ್ನು ಕಳೆದುಕೊಂಡಿದ್ದರು. ಇದರಿಂದ ಬೇಸರಗೊಂಡ ಭಾಗ್ಯಶ್ರೀ ತಾವು ಹೋಗುತ್ತಿದ್ದ ವಕೀಲಿ ವೃತ್ತಿ ಬಿಟ್ಟು, ಮೂರನೇ ಬಾರಿಗೆ ಮಾಡಿದ ಪ್ರಯತ್ನದಲ್ಲಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ